DISTRICT:
ಬೆಂಗಳೂರು: ಬಿಬಿಎಂಪಿಯು 2022–23ನೇ ಸಾಲಿನ ಬಜೆಟ್ ಅನ್ನು ಇದೇ 30ರಂದು ಅಂದ್ರೆ ನಾಳೆ ಮಂಡಿಸಲು ಸಿದ್ಧತೆ ನಡೆಸಿದೆ ಎಂದು ಗೊತ್ತಾಗಿದೆ. ಆದರೆ, ಪಾಲಿಕೆಯು ದಿನಾಂಕವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
‘ಈ ಆರ್ಥಿಕ ವರ್ಷದಲ್ಲೇ ಬಜೆಟ್ ಮಂಡಿಸದಿದ್ದರೆ ಕೆಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಇದೇ 30ರಂದು ಮಧ್ಯಾಹ್ನ 3 ಗಂಟೆಗೆ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಅಂತಾರೆ ಓರ್ವ ಬಿಬಿಎಂಪಿಯ ಅಧಿಕಾರಿ.
ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ–2003’ ಅನ್ವಯಗೊಳಿಸಿ ಸರ್ಕಾರ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಹಾಗಾಗಿ ಈ ಸಲ ‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ) ನಿಯಮಗಳು 2021’ರ ಅನ್ವಯವೇ ಬಜೆಟ್ ರೂಪಿಸಬೇಕಾಗಿದೆ. ನಾಲ್ಕು ವರ್ಷಗಳ ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರದ (ಸಿಎಜಿಆರ್) ಆಧಾರದಲ್ಲೇ ಪಾಲಿಕೆಯು ಬಜೆಟ್ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ.
ಹಿಂದಿನ ವರ್ಷದ ಕಂದಾಯ ಸ್ವೀಕೃತಿ ₹ 4ಸಾವಿರ ಕೋಟಿ ಆಗಿದ್ದರೆ, ಸಿಎಜಿಆರ್ ದರ ಶೇ 10 ಇದ್ದರೆ, ಕಂದಾಯ ಸ್ವೀಕೃತಿಯನ್ನು ₹4,400 ಕೋಟಿ ಎಂದು ಅಂದಾಜು ಮಾಡಿ ಅದಕ್ಕೆ ಬಂಡವಾಳ ಸ್ವೀಕೃತಿಯನ್ನು ಸೇರಿಸಿ ಬಜೆಟ್ ಗಾತ್ರವನ್ನು ನಿಗದಿಪಡಿಸಬೇಕಾಗುತ್ತದೆ. ಪಾಲಿಕೆಯ ಕಂದಾಯ ಸ್ವೀಕೃತಿ ಇದುವರೆಗೂ ₹ 4 ಸಾವಿರ ಕೋಟಿ ದಾಟಿಲ್ಲ. ಸರ್ಕಾರದ ಅನುದಾನವೂ ಸೇರಿದರೂ ಬಜೆಟ್ ಗಾತ್ರ ₹ 7 ಸಾವಿರ ಕೋಟಿ ಮೀರುವಂತಿಲ್ಲ ಎನ್ನುತ್ತವೆ ಪಾಲಿಕೆ ಮೂಲಗಳು.
ಬಿಬಿಎಂಪಿ ಕಾಯ್ದೆಯ ಸೆಕ್ಷನ್ 196ರ ಪ್ರಕಾರ ಬಿಬಿಎಂಪಿ ಬಜೆಟ್ ಅನ್ನು ಮುಂದಿನ ಆರ್ಥಿಕ ವರ್ಷಾರಂಭಕ್ಕಿಂತ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅಂಗೀಕರಿಸಬೇಕಿದೆ. ಆ ಪ್ರಕಾರ ಮಾ.10ರ ಒಳಗೆ ಬಜೆಟ್ ಮಂಡನೆ ಆಗಬೇಕಿತ್ತು.
2021–22ನೇ ಸಾಲಿನಲ್ಲಿ ಪಾಲಿಕೆ ₹ 9,286.80 ಕೋಟಿ ಬಜೆಟ್ ಅನ್ನು ಅಂಗೀಕರಿಸಿತ್ತು. ಸರ್ಕಾರವು ಬಜೆಟ್ ಗಾತ್ರವನ್ನು ಮತ್ತಷ್ಟು ಹೆಚ್ಚು ಮಾಡಿ ₹ 9,951.8 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿತ್ತು. ನಾಳೆ ಬಿಬಿಎಂಪಿ ಬಜೆಟ್ ಮಂಡಿಸುವ ಸಾಧ್ಯತೆ ಇದು, ಎಷ್ಟು ಆಯ..ಎಷ್ಟು ವ್ಯಯ ಎನ್ನುವ ಲೆಕ್ಕಚಾರದಲ್ಲಿ ಆರ್ಥಿಕ ವಿಶ್ಲೇಷಕರು ಇದ್ದಾರೆ.