DISTRICT:
ಚಿಕ್ಕಮಗಳೂರು: ಕಲಾತ್ಮಕತೆ ಹಾಗೂ ಸೂಕ್ಷ್ಮ ಅಭಿವ್ಯಕ್ತಿ ತೇಜಸ್ವಿ ಕಥೆಗಳ ವಿಶೇಷವಾಗಿದೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಸುಧಾ ಎ.ಆರ್ ತಿಳಿಸಿದರು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕೊಟ್ಟಿಗೆಹಾರದಲ್ಲಿ ನಡೆದ ತೇಜಸ್ವಿ ಓದು ಮೊಗೆದಷ್ಟು ಬೆರಗು ತೆರೆದಷ್ಟು ಅರಿವು ಸಾಮಾಜಿಕ ಜಾಲತಾಣಗಳ ನೇರಪ್ರಸಾರದ ಕಾರ್ಯಕ್ರಮದಲ್ಲಿ ತೇಜಸ್ವಿ ಅವರ ಹುಲಿಯೂರಿನ ಸರಹದ್ದು ಕೃತಿಯ ಬಗ್ಗೆ ಮಾತನಾಡಿದರು.
ಹುಲಿಯೂರಿನ ಸರಹದ್ದು ಕೃತಿಯಲ್ಲಿನ ಕಥೆಗಳು ಹಲವು ದಶಕಗಳ ಹಿಂದೆ ಬರೆದ ಕಥೆಗಳಾಗಿದ್ದರೂ ಕೂಡ ಈ ಕಥೆಗಳ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ವಿಭಿನ್ನ ಕಥಾವಸ್ತುವಿನ ಮೂಲಕ ಸಮಾಜವನ್ನು ತಿದ್ದುವ ವಿಚಾರಗಳೊಂದಿಗೆ ಈ ಕೃತಿಗಳ ಕಥೆಗಳು ಒಡಮೂಡಿವೆ ಎಂದರು.
ಅಪ್ಪಟ ಸಂಶೋಧಕನಾಗಿ, ಅನ್ವೇಷಕನಾಗಿ, ಲೇಖಕನಾಗಿ ಹಲವಾರು ಹೊಸತುಗಳಿಗೆ, ಮೊದಲುಗಳಿಗೆ ಕಾರಣರಾದವರು ತೇಜಸ್ವಿ ಅವರು. ಯುವ ಪೀಳಿಗೆಯ ಮೇಲೆ ತೇಜಸ್ವಿ ಅವರ ಪ್ರಭಾವ ಅಪಾರ. ಬದುಕಿದಂತೆ ಬರೆದ, ಬರೆದಂತೆ ಬದುಕಿದ ತೇಜಸ್ವಿ ತಮ್ಮ ಕೃತಿಗಳ ಮೂಲಕ ಜನರಿಗೆ ಹತ್ತಿರವಾದಂತೆ ತಮ್ಮ ವ್ಯಕ್ತಿತ್ವದ ಮೂಲಕವೂ ಜನಮನಕ್ಕೆ ಆಪ್ತರಾದವರು ಎಂದರು.
ಈ ಸಂದರ್ಭದಲ್ಲಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಕಾರ್ಯಕ್ರಮ ಸಂಯೋಜಕ ನಂದೀಶ್ ಬಂಕೇನಹಳ್ಳಿ, ತಾಂತ್ರಿಕ ಸಹಾಯಕರಾದ ಸ್ಯಾಮ್ಯುಯೆಲ್ ಹ್ಯಾರಿಸ್, ಲೇಖಕ ಪೂರ್ಣೆಶ್ ಮತ್ತಾವರ, ಪ್ರತಿಷ್ಠಾನದ ಸಿಬ್ಬಂದಿ ಸತೀಶ್ ಇದ್ದರು.