DISTRICT:
ಬಾಗಲಕೋಟೆ: ಶಿಕ್ಷಕರು ಮಕ್ಕಳನ್ನು ಆತ್ಮೀಯತೆಯಿಂದ ಕಂಡು, ಮಗುವನ್ನು ಶಿಕ್ಷಣ ನೀಡಲು ಸಂಪರ್ಕದಲ್ಲಿರಬೇಕು. ಟೀಚ್ ಮೆಂಟ್ ಆ್ಯಪ್ ಅಥವಾ ಚಂದನ ವಾಹಿನಿ ಮೂಲಕ ಪಾಠ ಕೇಳಲು ಹಾಜರಾಗಬೇಕು. ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಮೇಲ್ವಿಚಾರಣೆ ಮಾಡಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಉಸ್ತುವಾರಿ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ನಗರದ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಇಲಕಲ್ ಡೈಟ್, ಸಾಶಿಇ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾದಾಮಿ, ಬಾಗಲಕೋಟೆ, ಹುನಗುಂದ ತಾಲೂಕಿನ ಮೇಲ್ವಿಚಾರಣಾ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಸೇತುಬಂಧ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಟ್ಟಂತಹ ಗುರಿ ತಲುಪಲು ಪ್ರಯತ್ನಿಸಬೇಕು. ಪ್ರತಿಯೊಂದು ಶಾಲೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿರಬೇಕು. ಪ್ರತಿಯೊಬ್ಬ ಶಿಕ್ಷಕರು ಭಾಗವಹಿಸಬೇಕು. ಶಾಲೆಯಲ್ಲಿ ದಾಖಲಾದ ಪ್ರತಿ ಮಗುವಿನ ಚೈಲ್ಡ್ ಪ್ರೊಫೈಲ್ ಮಾಡಬೇಕು ಎಂದು ಹೇಳಿದರು.
ಉಪನಿರ್ದೇಶಕರ(ಅಭಿವೃದ್ಧಿ) ಡೈಟ್ ಪ್ರಾಚಾರ್ಯ ಬಿ.ಕೆ.ನಂದನೂರ ಅಧ್ಯಕ್ಷತೆ ವಹಿಸಿ ಮಾತನಾಡಿ ಲಾಕ್ ಡೌನ್ ಅವಧಿಯಲ್ಲಿ ಕಳೆದ ತಿಂಗಳು ಜಿಲ್ಲೆಯ 7500 ಜನ ಶಿಕ್ಷಕರಿಗೆ ಆನ್ ಲೈನ್ ತರಬೇತಿ, ಟೀಚ್ ಮೆಂಟ್ ತರಬೇತಿ ನೀಡಲಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ನಿರಂತರ ತರಬೇತಿ ನೀಡಲಾಗುತ್ತಿದೆ. ನಿಗದಿತ ಸಾಮರ್ಥ್ಯ ಗಳಿಸಲು ಮಕ್ಕಳಿಗೆ ಸೇತುಬಂಧವನ್ನು ಆನ್ ಲೈನ್/ಆಫ್ ಲೈನ್ ಮೂಲಕ ಮಾಡಬಹುದು. ಯುದ್ದೋಪಾದಿಯಲ್ಲಿ ಮಕ್ಕಳಿಗೆ ಕಲಿಕೆ ಮಾಡಬೇಕಾಗಿದೆ ಎಂದರು.
ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ(ಗುಣಮಟ್ಟ) ಜಾಸ್ಮೀನ್ ಕಿಲ್ಲೆದಾರ ಮಾತನಾಡಿ ಸೇತುಬಂಧ ಮೂಲಕ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಶಿಕ್ಷಕರು ಮಾಡಬೇಕು. ಸಿ.ಆರ್.ಪಿ.ಗಳು ಮೇಲ್ವಿಚಾರಣೆ ಮಾಡಬೇಕಿದೆ ಎಂದರು.