DISTRICT:
ವಿಜಯನಗರ (ಬಳ್ಳಾರಿ): ಹೂವಿನ ಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥಗೊಂಡ ಪ್ರಕರಣದಲ್ಲಿ ಇದುವರೆಗೆ ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಕಳೆದ 20 ದಿನಗಳ ಹಿಂದೆ ಕಲುಷಿತ ನೀರು ಕುಡಿದು ಇನ್ನೂರಕ್ಕೂ ಅಧಿಕ ಜನ ಅಸ್ವಸ್ಥಗೊಂಡಿದ್ದರು. ಸದ್ಯ ಬಳ್ಳಾರಿ, ಹೊಸಪೇಟೆ ಹಾಗು ಹುಬ್ಬಳ್ಳಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಆರುಜನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಲಕ್ಷ್ಮಮ್ಮ, ಬಸಮ್ಮ, ಬೆಳವಿಗಿ ನೀಲಪ್ಪ, ಗೋಣೆಪ್ಪ, ಮಹದೇವಪ್ಪ, ಕೆಂಚಮ್ಮ ವಾಂತಿ ಭೇದಿಯಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಲುಷಿತ ನೀರು ಸೇವನೆಯಿಂದ ಆರು ಜನ ಸಾವನ್ನಪ್ಪಿದ ಹಿನ್ನೆಲೆ ಮಕರಬ್ಬಿ ಗ್ರಾಮಕ್ಕೆ ಅಧಿಕಾರಿಗಳ ದಂಡು ದೌಡಾಯಿಸಿದೆ. ಹೊಸಪೇಟೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ಹಡಗಲಿ ತಹಸೀಲ್ದಾರ್ ಮಹೇಂದ್ರ, ತಾಲೂಕು ಪಂಚಾಯತಿ ಇಓ ಪ್ರಭಾಕರ ರೆಡ್ಡಿ, ಆರೋಗ್ಯಾಧಿಕಾರಿ ವಿನೋದ್, ನೈರ್ಮಲ್ಯ ಇಲಾಖೆ ಎಡಬ್ಲ್ಯೂಇ ಭೇಟಿ ನೀಡಿ ಗ್ರಾಮಸ್ಥರು ಹಾಗೂ ಗ್ರಾಪಂ ಸದಸ್ಸ ಸಿಬ್ಬಂದಿ ಜೊತೆ ಸಭೆ ನಡೆಸುತ್ತಿದ್ದಾರೆ.
ಮೃತ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ
ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಪ್ರಕರಣ ದುಃಖದ ಸಂಗತಿಯಾಗಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಪ್ರತಿ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ, ವರದಿ ನೀಡಲು ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.