DISTRICT:
ಬೆಂಗಳೂರು : ದಲಿತ ಸಂಘರ್ಷ ಸಮಿತಿ (ಸಮತಾವಾದ)ರಾಜ್ಯ ಸಮಿತಿ ವತಿಯಿಂದ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ 66ನೇ ಪರಿ ನಿರ್ವಾಣ ದಿನದ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣ ಪ್ರಯುಕ್ತ ಸ್ವಾಭಿಮಾನಿ ಸಂಕಲ್ಪ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಬನ್ನಪ್ಪ ಪಾರ್ಕ್ ನಿಂದ ವಿಧಾನಸೌಧದ ಡಾ.ಅಂಬೇಡ್ಕರ್ ಪ್ರತಿಮೆವರೆಗೆ ಕೈಯಲ್ಲಿ ಗುಲಾಬಿ ಹೂವುಗಳನ್ನು ಹಿಡಿದು ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಮಾರಪ್ಪ ನೇತೃತ್ವದಲ್ಲಿ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಯಿತು.
ನಂತರ ವಿಧಾನಸೌಧದ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಅರ್ಪಿಸಲಾಯಿತು.
ನಂತರ ಮಾತನಾಡಿದ ಸಂಘಟನೆ ರಾಜ್ಯಾಧ್ಯಕ್ಷ ಮಾರಪ್ಪ ಅವರು, ದಲಿತರ ಮೇಲೆ ಹೆಚ್ಚುತ್ತಿರುವ ದಮನ-ದೌರ್ಜನ್ಯಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿಗಾಗಿ ಜನಸಂಖ್ಯೆ ಆಧಾರದಲ್ಲಿ ಆಯವ್ಯಯ ಹಂಚಿಕೆ ಮಾಡಿ ವಿವಿಧ ಇಲಾಖೆಗಳ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿರುವ, (ಸಿಎಸ್ ಎಪ್ಪಿ-ಟಿಎಸ್ಪಿ ) ಹಣವನ್ನು ನಿಗದಿತ ಯೋಜನೆಗೆ ಖರ್ಚು ಮಾಡದಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಈ ಬಗ್ಗೆ ನಿವಾವಹಿಸಿ ನಿರ್ದಿಷ್ಠ ಯೋಜನೆಯ ಹಣವನ್ನು ದಲಿತರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ಜಾಗೃತಿ ಜಾಥಾದಲ್ಲಿ ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.