DISTRICT: ಉಡುಪಿ: ಎರಡು ದಿನಗಳ ಹಿಂದೆ ಕುಂದಾಪುರ ತಾಲೂಕು ವ್ಯಾಪ್ತಿಯ ಯಡಮೊಗೆಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸದ್ಯ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಶನಿವಾರ ತಡರಾತ್ರಿ ಯಡಮೊಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ತಮ್ಮ ಊರಿನ ಗ್ರಾಮಸ್ಥ ಉದಯ ಗಾಣಿಗ ನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಾಣೇಶ್ ಯಡಿಯಾಳನನ್ನು ಪೊಲೀಸರು ಶನಿವಾರ ರಾತ್ರಿಯೆ ಬಂಧಿಸಿದ್ದಾರೆ. ಸದ್ಯ ಈ ವಿಚಾರವಾಗಿ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ಸಂತ್ರಸ್ತ ಕುಟುಂಬಕ್ಕೆ ಬೆಂಬಲ ನೀಡಿ ಪತ್ರಿಕಾಗೋಪ್ಠಿ ಕರೆದಿದ್ದಾರೆ. ಅಲ್ಲಿ ಮಾತನಾಡಿದ ಅವರು ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಒಳಗೆ ಭಿನ್ನಮತ ಎದ್ದಿದೆ. ಬಿಜೆಪಿ ನಾಯಕರು ಪಾಳೇಗಾರಿಕೆ ನಡೆಸುತ್ತಿದ್ದಾರೆ. ಇದನ್ನು ವಿರೋಧಿಸುವ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿರುವುದು ಆತಂಕಕರ. ಕ್ಷೇತ್ರದಲ್ಲಿ ಸಾಮರಸ್ಯ ಕಾಪಾಡಬೇಕಾದವರೇ ಅಶಾಂತಿ ಸೃಷ್ಟಿಸುತ್ತಿದ್ದು, ನೈತಿಕ ಹೊಣೆ ಹೊತ್ತು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿಗಳಿಗೆ ಬಿಜೆಪಿಯ ಮುಖಂಡರು ರಕ್ಷಣೆ ನೀಡುವುದನ್ನು ಬಿಟ್ಟು ಕೊಲೆಯಾದ ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.