DISTRICT: ಕೊಡಗು : ಪೊನ್ನಂಪೇಟೆ ಕಣ್ಣಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಕಲಚೇತನರಿಗೆ ಮತ್ತು ಕೋವಿಡ್ ಕಾಲದಲ್ಲಿ ಸಂಕಷ್ಟ ಎದುರಿಸುತ್ತಿರುವವರಿಗೆ ಸೋಮವಾರದಂದು ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾದ ಎ. ಎಸ್. ಪೊನ್ನಣ್ಣ ಅವರು ಪ್ರಾಯೋಜಿಸಿರುವ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ಗಳನ್ನು ಅಲ್ಲಿನ ಚಾಮುಂಡಿ ಪೈಸಾರಿಯ ವಿಕಲಚೇತನರಾದ ವಿಲಾಶಿನಿ, ಕಣ್ಣಂಗಾಲದ ಒಕ್ಕಲಿಗರ ಗಣೇಶ್ ಸೇರಿದಂತೆ ಅರ್ಹ ಫಲಾನುಭವಿಗಳಿಗೆ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಅವರ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ತಂಡ ಅವರವರ ಮನೆಗೆ ತೆರಳಿ ಹಸ್ತಾಂತರಿಸಿತು. ಕಿಟ್ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಪ್ರದಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಅವರು, ಕಾಂಗ್ರೆಸ್ ಪಕ್ಷ ಕೇವಲ ಪಕ್ಷ ರಾಜಕಾರಣಕ್ಕೆ ಮಾತ್ರ ಸೀಮಿತವಾಗದೆ, ನೊಂದ ಜನರ ಕಣ್ಣೀರು ಒರೆಸುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ತೊಂದರೆ ಅನುಭವಿಸುತ್ತಿರುವ ಜನರಿಗೆ ರಾಜ್ಯ ವ್ಯಾಪ್ತಿಯಾಗಿ ಕಾಂಗ್ರೆಸ್ ಪಕ್ಷ ನೆರವು ನೀಡುತ್ತಿದೆ. ಆದ್ದರಿಂದ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮುಂದೆಯೂ ಪಕ್ಷದ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ನೆರವು ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ಹೇಳಿದರು. ಕಣ್ಣಂಗಾಲ ಗ್ರಾ. ಪಂ. ಅಧ್ಯಕ್ಷರಾದ ಟಿ. ವಿ. ಗಣೇಶ, ಉಪಾಧ್ಯಕ್ಷರಾದ ಗ್ರೀಷ್ಮ, ಸದಸ್ಯರಾದ ವಿ. ಪಿ. ಜೀವನ್, ವಿ. ಪಿ. ಕಲ್ಪೇಶ್, ಶಾಂತಿ, ರಜನಿ ಕುಟ್ಟಪ್ಪ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.