DISTRICT:
ದಾವಣಗೆರೆ: ಅಪಘಾತವಾಗಿ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಕೆಎಸ್‍ಆರ್ ಟಿಸಿ ಸಂಸ್ಥೆಗೆ ಸೇರಿದ ಹಾವೇರಿ ವಿಭಾಗದ ಬಸ್ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೆಎಸ್‍ಆರ್ ಟಿಸಿ ಬಸ್ ವೊಂದನ್ನು ಜಪ್ತಿ ಮಾಡಲಾಯಿತು.
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಂಥಗಿ ಗ್ರಾಮದ ಸಾಫ್ಟ್ ವೇರ್ ಇಂಜಿನಿಯರ್ ಸಂಜೀವ್ ಪಾಟೀಲ್ (39) ಎಂಬಾತ 2013ರಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತುಮಕೂರು ಜಾಸ್ ಟೋಲ್ ಬಳಿ ಬಸ್ ನಿಂತಾಗ ಶೌಚಾಲಯಕ್ಕೆ ಹೋಗಿ ವಾಪಸ್ಸಾಗುವಾಗ ಹಾವೇರಿ ಡಿಪೋದ ಬಸ್ ಡಿಕ್ಕಿ ಹೊಡೆದಿತ್ತು ಪರಿಣಾಮ ಸಂಜೀವ್ ಪಾಟೀಲ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2017ರಲ್ಲಿ 2, 82, 42, 885 ರೂ. ಮೃತ ವ್ಯಕ್ತಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ನಂತರ ಕೆಎಸ್‍ಆರ್ ಟಿಸಿ ಪರಿಹಾರದ ಹಣ ನೀಡಿದಿದ್ದಾಗ ನ್ಯಾಯಾಲಯದ ಆದೇಶದಂತೆ ಹಿಂದೆಯೂ ಬಸ್ ಜಪ್ತಿ ಮಾಡಲಾಗಿತ್ತು. ಆಗ ಸ್ವಲ್ಪ ಪರಿಹಾರ ನೀಡಿತ್ತು.
ಅಲ್ಲಿಂದ ಇಲ್ಲಿಯವರೆಗೂ ಉಳಿದ ಪರಿಹಾರದ ಹಣ ನೀಡದ ಕಾರಣ ನ್ಯಾಯಾಲಯವು ಸೆಪ್ಟೆಂಬರ್ 8, 2021ರಲ್ಲಿ ಹಾವೇರಿ ಡಿಪೋಗೆ ಸೇರಿದ ಬಸ್ ಜಪ್ತಿಗೆ ಆದೇಶ ನೀಡಿತ್ತು. ಇಂದು ನ್ಯಾಯಾಲಯದ ಸಿಬ್ಬಂದಿ ನಗರದ ಕೆಎಸ್‍ಆರ್ ಟಿಸಿಯ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಒಂದು ಬಸ್‍ನ್ನು ಜಫ್ತಿ ಮಾಡಿದ್ದಾರೆ. ನ್ಯಾಯಾಲಯದ ಸಿಬ್ಬಂದಿಯಾದ ರಾಜಕುಮಾರ್, ಮಹೇಶ್, ಪರಮೇಶ್, ಗುರುಮೂರ್ತಿ, ಶ್ರೀಧರ್ ಸೇರಿದಂತೆ ಇತರರು ಇದ್ದರು.