DISTRICT:
ದಾವಣಗೆರೆ: ಜಿಲ್ಲೆಯಲ್ಲಿ ವರುಣನ ಆರ್ಭಟ ತಗ್ಗಿದ್ದರೂ ತುಂಗಾಭದ್ರಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಪ್ರವಾಹ ಭೀತಿ ಕಡಿಮೆಯಾಗಿಲ್ಲ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲ ಗ್ರಾಮಗಳಲ್ಲಿ ಆತಂಕ ಮುಂದುವರಿದಿದೆ.
ನ್ಯಾಮತಿ ತಾಲೂಕಿನ ಸೋಗಿಲು, ಚಟ್ನಹಳ್ಳಿ, ಗಂಜೇನಹಳ್ಳಿ, ಫಲವನಹಳ್ಳಿ, ಕುಂಕುವ, ಒಡೆಯರಹತ್ತೂರು,ಗಂಗನಕೋಟೆ,ಕಂಕನಹಳ್ಳಿ,ಕೊಡಚಗೊಂಡನಹಳ್ಳಿ,ದಾನಿಹಳ್ಳಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ವರುಣನ ಆರ್ಭಟದಿಂದ ಸಾವಿರಾರು ಎಕರೆ ಜಲಾವೃತಗೊಂಡಿದೆ. ಮಳೆಯಿಂದ ನಾಲೆ, ಬೆಳೆಗಳು ಕೊಚ್ಚಿ ಹೋಗಿವೆ.
ಕಳೆದೊಂದು ವಾರದ ಸುರಿದ ಮಳೆ ಹಾಗೂ ತುಂಗಾನದಿಗೆ ಬರುತ್ತಿರುವ ಹೆಚ್ಚಿನ ನೀರಿನಿಂದಾಗಿ ಅವಳಿ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ. ಅವಳಿ ತಾಲೂಕಿನಾದ್ಯಂತ 107 ಕ್ಕೂ ಹೆಚ್ಚು ಮನೆಗಳು ಸೇರಿದಂತೆ ಸಾಕಷ್ಟು ಬೆಳೆ ನಾಶವಾಗಿದೆ. ಕೂಡಲೇ ಅಧಿಕಾರಿಗಳು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದ ಶಾಸಕ ಎಂ. ಪಿ. ರೇಣುಕಾಚಾರ್ಯ ಅವಳಿ ತಾಲೂಕನ್ನು ನೆರೆಪೀಡಿತ ಪ್ರದೇಶ ಎಂದು ಘೋಷಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಹಿರೇಹಳ್ಳ ಮೈದುಂಬಿ ಹರಿಯುತ್ತಿದ್ದು, ನ್ಯಾಮತಿ ತಾಲೂಕಿನ ಗಂಜೇನಹಳ್ಳಿರುವ ಹಿರೇಹಳ್ಳ ಕೋಡಿಬಿದ್ದಿದೆ. ಸಾಲಬಾಳು-ಗಂಜೇನಹಳ್ಳಿ ಸಂಪರ್ಕಿಸುವ ರಸ್ತೆಯ ಮೇಲೆ ಹರಿಯುತ್ತಿರುವ ನೀರು ಹರಿಯುತ್ತಿದ್ದು, ಸಾಲಬಾಳು- ಗಂಜೇನಹಳ್ಳಿ ಸಂಪರ್ಕ ಕಡಿತಗೊಂಡಿದೆ.