DISTRICT:
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸಂಜೆಯಿಂದ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಇದರಿಂದ ಸಾಯಂಕಾಲ ಮನೆಗಳಿಗೆ ತೆರಳುವ ವಾಹನ ಸವಾರರು ಪರದಾಡುತ್ತಿದ್ದಾರೆ. ಮಳೆಯಿಂದ ಬೀದಿ ಬದಿ ವ್ಯಾಪಾರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ವ್ಯಾಪಾರವಿಲ್ಲದಂತಾಗಿದೆ. ಇನ್ನೂ ನಗರದ ಹಲವಡೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುತಿದ್ದಾರೆ.
ಬೆಂಗಳೂರು ನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಮುಂದಿನ 3 ಗಂಟೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೀದರ್, ಕಲಬುರಗಿ, ವಿಜಯಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ರಾಮನಗರ, ಹಾಸನ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಬೀಸಿದ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಹವಾಮಾನ ಇಲಾಖೆ ದಕ್ಷಿಣ ಒಳನಾಡಿ, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 5 ದಿನ ಮಳೆಯಾಗಲಿದ್ದು, ಯಲ್ಲೋ ಅಲರ್ಟ್ ಘೋಷಣೆಯಾಗಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ 3 ದಿನಗಳ ಮಳೆ ಇರಲಿದ್ದು, ಇಲ್ಲಿಯು ಕೂಡ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಕರಾವಳಿ ಭಾಗದಲ್ಲೂ ಅಧೀಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಯಲ್ಲೋ ಅಲರ್ಟ್ ನೀಡಲಾಗಿದೆ.