DISTRICT: ಧಾರವಾಡ: ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು, ಎಲ್ಲ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಜಿಲ್ಲಾಡಳಿತದ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ಸ್ಥಳಿಯವಾಗಿ ಸಾರ್ವಜನಿಕರಿಗೆ ಲಭ್ಯವಿದ್ದು, ಪ್ರವಾಹ, ಮಳೆಹಾನಿ ಸಂಭವಿಸಿದಲ್ಲಿ ತಕ್ಷಣ ಸ್ಪಂದಿಸಿ ನೆರವಾಗಬೇಕು. ಮತ್ತು ಈ ಕುರಿತು ವಿಳಂಬವಿಲ್ಲದೆ ತಮಗೆ ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಆದೇಶಿಸಿದರು. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ “ಪ್ರವಾಹ, ಮಳೆಹಾನಿ ತೆಡೆಯಲು ಕೈಗೊಂಡ ಪೂರ್ವಸಿದ್ದತೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಜರುಗಿದ ಸಂವಾದ”ದ ನಂತರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿ ಅವರು, ಜಿಲ್ಲೆಯಲ್ಲಿ ಮಳೆಯ ಅಬ್ಬರ ಇನ್ನೂ ಹೆಚ್ಚಾದರೆ 8 ತಾಲೂಕುಗಳ ಪೈಕಿ 78 ಗ್ರಾಮಗಳನ್ನು ಪ್ರವಾಹಕ್ಕೆ ಒಳಗಾಗಬಹುದಾದ ಸಂಭವನೀಯ ಗ್ರಾಮಗಳೆಂದು ಗುರುತಿಸಲಾಗಿದ್ದು, ಪ್ರವಾಹಕ್ಕೆ ತುತ್ತಾಗಬಹುದಾದ ಪ್ರತಿ ಗ್ರಾಮಕ್ಕೆ ಒಬ್ಬ ಅಧಿಕಾರಿಯನ್ನು ನೊಡಲ್ ಅಧಿಕಾರಿ ಎಂದು ನೇಮಿಸಿ, ಆದೇಶಿಸಿಲಾಗಿದೆ ಎಂದು ಅವರು ಹೇಳಿದರು. ಪ್ರತಿ ತಾಲೂಕಿನಲ್ಲಿ ಗುರುತಿಸಿರುವ ಪ್ರವಾಹ ಪೀಡಿತವಾಗಬಹುದಾದ ಗ್ರಾಮಕ್ಕೆ ಆಯಾ ನೋಡೆಲ್ ಅಧಿಕಾರಿ, ತಹಶಿಲ್ದಾರ್ ಮತ್ತು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜಂಟಿಯಾಗಿ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಬೇಕು. ಗ್ರಾಮ ಅಥವಾ ಗ್ರಾಮ ಸಮೀಪದ ಶಾಲೆ, ಸಮುದಾಯ ಭವನ ಅಥವಾ ಕಲ್ಯಾಣ ಮಂಟಪಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಗ್ರಾಮ ಭೇಟಿ ನಂತರ ಆಯಾ ತಹಶಿಲ್ದಾರ್ ತಾಲೂಕಾ ಮಟ್ಟದಲ್ಲಿ ಎಲ್ಲ ನೋಡೆಲ್ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ವರದಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಮಹಾನಗರ ವ್ಯಾಪ್ತಿಯಲ್ಲಿ ಮ್ಯಾನ್‍ಹೋಲ್‍ಗಳ ಸಮೀಕ್ಷೆ ಮಾಡಿ, ಮುಚ್ಚುವಂತೆ ಮತ್ತು ಮಳೆ ನೀರು ಸರಾಗವಾಗಿ ಹರಿದು ಹೊಗಲು ಒಳಚರಂಡಿ, ನಾಲಾ ಮತ್ತು ರಾಜಕಾಲುವೆಗಳನ್ನು ಸ್ವಚ್ಚವಾಗಿ ಇಡುವಂತೆ ಮತ್ತು ಕಳೆದ ಸಾಲಿನ ಅನುಭವದ ಮೇಲೆ ಮಹಾನಗರ ವ್ಯಾಪ್ತಿಯ ನೆರೆ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಜನರಿಗೆ ಸುರಕ್ಷತೆ ಕುರಿತು ಮಾಹಿತಿ ನೀಡಬೇಕು. ಅಗತ್ಯವಿರುವಲ್ಲಿ ಕಾಳಜಿ ಕೇಂದ್ರ ತೆರಯಲು ಸಿದ್ಧತೆ ಮಾಡಿಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೂ ಈ ವೇಳೆ ಸೂಚಿಸಿದರು.