DISTRICT:
ಚಿತ್ರದುರ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆ ಸೋಮವಾರ ಕೋಟೆನಾಡು ಪ್ರವೇಶಿಸಲಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲಕ ಹಿರಿಯೂರಿಗೆ ಬರಲಿದೆ.
ಸೆ.30ರಂದು ಕರ್ನಾಟಕ ಪ್ರವೇಶಿಸಿದ ಯಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ಬರುತ್ತಿದೆ.
ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮುರು ಮಾರ್ಗವಾಗಿ ಅ. 14ರಂದು ಬಳ್ಳಾರಿ ಜಿಲ್ಲೆಗೆ ತೆರಳಲಿದೆ. ಜಿಲ್ಲೆಯಲ್ಲಿ ಐದು ದಿನ ಯಾತ್ರೆ ಸಂಚರಿಸಲಿದೆ.
ಪೂರ್ವನಿಗದಿಯಂತೆ ಯಾತ್ರೆ ಅ.12ರಂದು ಜಿಲ್ಲೆಗೆ ಬರಬೇಕಿತ್ತು. ಅ.15ರಂದು ಬಳ್ಳಾರಿಯಲ್ಲಿ ಸಮಾವೇಶ ಏರ್ಪಡಿಸಿದ ಕಾರಣಕ್ಕೆ ಯಾತ್ರೆ ಎರಡು ದಿನ ಮುನ್ನ ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಪಾದಯಾತ್ರೆ ಮಾರ್ಗದ ಪರಿಶೀಲನೆ, ವಸತಿ, ಊಟ, ಸಭೆ ಹಾಗೂ ಸಂವಾದ ಸೇರಿ ಇತರ ಸಿದ್ಧತೆಗಳು ಭರದಿಂದ ಸಾಗಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಅನೇಕ ಗಣ್ಯರು ಭಾನುವಾರ ಸಂಚರಿಸಿ ಸಿದ್ಧತೆ ಪರಿಶೀಲಿಸಿದ್ದಾರೆ.
ತುಮಕೂರು ಗಡಿಯಿಂದ ಬಳ್ಳಾರಿ ಗಡಿಯವರೆಗೆ 130 ಕಿ.ಮೀ ದೂರದವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಯಾತ್ರೆ ಸಾಗಲಿದೆ. ರಾಷ್ಟ್ರೀಯ ಹೆದ್ದಾರಿ 150-ಎ ಮಾರ್ಗದಲ್ಲಿ ಯಾತ್ರೆ ತೆರಳಲಿದೆ. ಯಾತ್ರೆಗೆ ಸಂಬಂಧಿಸಿದ ಫ್ಲೆಕ್ಸ್, ಬ್ಯಾನರ್‌ಗಳು ಮಾರ್ಗದಲ್ಲಿ ರಾರಾಜಿಸುತ್ತಿವೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಅನೇಕ ಗಣ್ಯರ ಫ್ಲೆಕ್ಸ್ ಅಳವಡಿಸಿ ಬಿರುಸಿನ ಪ್ರಚಾರ ನಡೆಸಲಾಗುತ್ತಿದೆ.
ಸಂಜೆ 4ಕ್ಕೆ ಪ್ರವೇಶ: ತುಮಕೂರು ಜಿಲ್ಲೆಯ ಹುಳಿಯಾರು ಮೂಲಕ ಯಾತ್ರೆ ಹಿರಿಯೂರು ತಾಲ್ಲೂಕು ಪ್ರವೇಶಿಸಲಿದೆ. ತುಮಕೂರು ಗಡಿಯಿಂದ ಯಾತ್ರಾರ್ಥಿಗಳು ವಾಹನದಲ್ಲಿ ಹಿರಿಯೂರು ನಗರಕ್ಕೆ ಸಂಜೆ 4ಕ್ಕೆ ಬರಲಿದ್ದಾರೆ. ವಿಜ್ಞಾನ ಕಾಲೇಜು ಮೈದಾನದಲ್ಲಿ ಯಾತ್ರೆ ಸ್ವಾಗತಿಸಲಾಗುತ್ತದೆ. ಜನರನ್ನು ಸೇರಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಹಿರಿಯೂರು, ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.