DISTRICT: ಕೊಡಗು: ನಾನು ಭಾರತೀಯ ಜನತಾ ಪಕ್ಷದ ಗುಂಪಿನಲ್ಲಿದ್ದೇನೆಯೇ ಹೊರತು ಬೇರೆ ಯಾವ ಗುಂಪಿನಲ್ಲೂ ಅಲ್ಲ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರ ಹಾಗೂ ಬಿಜೆಪಿ ಕೇಂದ್ರ ಮುಖಂಡ ಅರುಣ್ ಸಿಂಗ್ ಅವರನ್ನು ಭೇಟಿಯಾಗಿರುವ ಬಗ್ಗೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದ ಭಾರತೀಯ ಜನತಾ ಪಕ್ಷದ ವಿಚಾರದ ಕುರಿತು ಅರುಣ್ ಸಿಂಗ್ ಅವರನ್ನು ಭೇಟಿಯಾಗಿದ್ದೇನೆ. ಪಕ್ಷದ ಬಗ್ಗೆ ಹೇಳಬೇಕಿತ್ತು, ಅದನ್ನು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು. ಪಕ್ಷದ ಗುಂಪುಗಾರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಂಜನ್, ನಾನು ಭಾರತೀಯ ಜನತಾ ಪಕ್ಷದ ಗುಂಪಿನಲ್ಲಿದ್ದೇನೆ, ಬೇರೆ ಯಾವ ಗುಂಪಿನಲ್ಲಿಲ್ಲ. ಎಲ್ಲಾ ಪಕ್ಷಗಳಲ್ಲೂ ಜಗಳ, ಒಳ ಜಗಳಗಳಿವೆ. ನಮ್ಮ ಮನೆಯ ಜಗಳವನ್ನು ಚರ್ಚಿಸಿ, ಬಗೆಹರಿಸಿಕೊಳ್ಳುತ್ತೇವೆ. ಅದನ್ನು ಬಹಿರಂಗವಾಗಿ ಹೇಳುವ ಪ್ರಶ್ನೆಯೇ ಇಲ್ಲ. ನಾನು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷದ ಪರವಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.