DISTRICT: ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಬೀಳುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ನೀರಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗುತ್ತಿದೆ. ಮಡಿಕೇರಿ, ವಿರಾಜಪೇಟೆ, ಗೋಣಿಕೊಪ್ಪ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಭಾರೀ ಮಳೆ, ಗಾಳಿ ಬೀಸುತ್ತಿದೆ. ಗಾಳಿಯಿಂದಾಗಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಮರಗಳು ಧರೆಗುರುಳಿದ್ದು ರಸ್ತೆ ಸಂಚಾರವೂ ಕೆಲವೆಡೆ ವ್ಯತ್ಯಯವಾಗಿದೆ. ವಿದ್ಯುತ್ ಕಂಬಗಳೂ ಗಾಳಿ, ಮಳೆಯಿಂದಾಗಿ ಬಿದ್ದು ಹೋಗಿದ್ದು ಚೆಸ್ಕಾಂ, ಅರಣ್ಯ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾಯಾ೯ಚರಣೆ ಮೂಲಕ ಸಮಸ್ಯೆ ಪರಿಹರಿಸುತ್ತಿದ್ದಾರೆ . ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 95 ಮಿ.ಮೀ.ಮಳೆಯಾಗಿದ್ದು ಈವರೆಗೆ 374 ಮಿ.ಮೀ ಮಳೆಯಾಗಿದೆ. ತಲಕಾವೇರಿಯಲ್ಲಿ 128, ಭಾಗಮಂಡಲದಲ್ಲಿ 116 , ಶ್ರೀಮಂಗಲದಲ್ಲಿ 95 ,ನಾಪೋಕ್ಲುವಿನಲ್ಲಿ 90 ಮಿ.ಮೀ. ಮಳೆಯಾಗಿದೆ. 2859 ಅಡಿ ಗರಿಷ್ಟ ಸಾಮಥ್ಯ೯ದ ಹಾರಂಗಿ ಜಲಾಶಯದಲ್ಲಿ 2832 ಅಡಿ ನೀರು ಸಂಗ್ರಹವಿದ್ದು, ಜಲಾಶಯಕ್ಕೆ 1411 ಕ್ಯೂಸೆಕ್ ನೀರಿನ ಒಳಹರಿವಿದೆ.