DISTRICT: ವಿಶೇಷ ವರದಿ: ಮೊಹಮ್ಮದ್ ಷರೀಫ್ ಜೂನ್ 9ರ ರಾತ್ರಿ 10ರ ಸಮಯ. "ಅವರು ಕೊಲೆ ಮಾಡ್ತಾ ಇದ್ದಾರೆ". "ನನ್ನನ್ನು ಕೊಲೆ ಮಾಡ್ತಾರೆ". ಹೀಗೆಂದು ಜೋರಾಗಿ ಬೊಬ್ಬಿಡುತ್ತಾ ಕಿರುಚಾಡುತ್ತಾ, ಮಾನಸಿಕವಾಗಿ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ವಿರಾಜಪೇಟೆ ನಗರದಲ್ಲಿ ಓಡಾಡ್ತಾ ಇದ್ದರು. ಅವರ ಹೆಸರು ರಾಯ್ ಡಿಸೋಜ. ಅವರಿಗೆ 50 ವಯಸ್ಸಿರಬಹುದು. ಈ ವ್ಯಕ್ತಿ ಮಾನಸಿಕ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ. ಈತನ ವಿಷಯ ಸ್ಥಳಿಯರಿಗೆ ಈ ಮೊದಲೇ ಗೊತ್ತಿದ್ದರಿಂದಲೋ ಏನೋ ಅವರು ಈತನ ಮಾತುಗಳಿಗೆ ಅಷ್ಟಾಗಿ ಕಿವಿಗೊಡದೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೆ ಸ್ವಲ್ಪ ಸಮಯ ಕಳೆದ ನಂತರ ರಾತ್ರಿ ಸರಿ ಸುಮಾರು 12ರ ವೇಳೆ ವಿರಾಜಪೇಟೆ ಪಟ್ಟಣದ ಠಾಣಾ ಪೊಲೀಸರು ಈ ಮಾನಸಿಕ ಅಸ್ವಸ್ಥನ ಮನೆಗೆ ತೆರಳಿ ಆತನ್ನು ಬಂದಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ರಾಯ್ ಡಿಸೋಜ ಅವರನ್ನು ಠಾಣೆಗೆ ಕರೆದೊಯ್ದು ತೀವ್ರವಾಗಿ ಹಲ್ಲೆ ನಡೆಸಿದ್ದು, ಆತ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಬಳಿಕ ಪೊಲೀಸರು ರಾಯ್ ಡಿಸೋಜ ಮನೆಗೆ ತೆರಳಿ ಅವರ ತಾಯಿ ಮೆಟೆಲ್ಲಾ ಲೋಬೊ ಅವರನ್ನು ಠಾಣೆಗೆ ಕರೆಯಿಸಿ, ಮಗನನ್ನು ಮನೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಮನೆಗೆ ಬಂದು ತಾಯಿ ಮೆಟೆಲ್ಲಾ ಲೋಬೊ ತಮ್ಮ ಮಗ ರಾಯ್ ಡಿಸೋಜ ದೇಹವನ್ನು ಪರಿಶೀಲಿಸಿದ ಸಂದರ್ಭ ದೇಹದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಜೂನ್ 10ರ ಬೆಳಗ್ಗಿನ ಜಾವ ವಿರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು, ಗಾಯಾಳು ರಾಯ್ ಡಿಸೋಜ ಅವರನ್ನು ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ತಿಳಿಸಿದ್ದಾರೆ ಮತ್ತು ಚಿಕಿತ್ಸೆಗೆ ಆಗುವ ಖರ್ಚು ವೆಚ್ಚಗಳನ್ನು ಪೊಲೀಸರೇ ಭರಿಸುವುದಾಗಿ ಹೇಳಿದ್ದಾಗಿ ವರಧಿಯಾಗಿದೆ. ಜೂ.10ರಂದು ವಿರಾಜಪೇಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ವೈದ್ಯರು ಪರಿಶೀಲನೆ ನಡೆಸಿ ತಕ್ಷಣವೇ ಗಾಯಾಳುವನ್ನು ಮಡಿಕೇರಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಅದರಂತೆ ರಾಯ್ ಡಿಸೋಜ ಅವರನ್ನು ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂದರ್ಭ ಆಸ್ಪತ್ರೆಗೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಗನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸುವಂತೆ ಮೆಟೆಲ್ಲಾ ಲೋಬೊ ಅವರಿಗೆ ಒತ್ತಡ ಹೇರಿದ್ದಲ್ಲದೆ, ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡುವಂತೆ ಒತ್ತಡ ಹೇರಿದ್ದರು ಎಂದು ಆರೋಪಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜೂ.12ರ ಬೆಳಗ್ಗೆ 9 ಗಂಟೆ ಸುಮಾರಿನಲ್ಲಿ ರಾಯ್ ಡೇವಿಡ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಾನಸಿಕ ಹಾಗೂ ಮೂರ್ಛೆ ರೋಗದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ವಿರಾಜಪೇಟೆ ಪಟ್ಟಣ ಠಾಣಾ ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ತೀವ್ರ ಚಿಂತಾಜನಕ ಸ್ಥಿತಿಯಲ್ಲಿದ್ದ ಆತ ಮಡಿಕೇರಿಯ ಅಶ್ವಿನಿ ಅಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ ಎನ್ನುವ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಹೋದರ ರಾಬಿನ್ ಡಿಸೋಜಾ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದು ಮೂಲದ ಪ್ರಕಾರ: ಮತ್ತೊಂದು ಮೂಲದ ಪ್ರಕಾರ ವಿರಾಜಪೇಟೆ ಪಟ್ಟಣ ನಿವಾಸಿ ರಾಯ್ ಡಿಸೋಜ ಹಲವು ಸಮಯದಿಂದ ಮಾನಸಿಕ ಅಸ್ವಸ್ಥತೆ ಮತ್ತು ಮೂರ್ಛೆ ರೋಗದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜೂ.9ರ ರಾತ್ರಿ ತಾಯಿಗೆ ತಿಳಿಯದಂತೆ ಮನೆಯಿಂದ ಹೊರ ಹೋದ ರಾಯ್ ಡಿಸೋಜ ರಸ್ತೆಯಲ್ಲಿ ಕತ್ತಿ ಹಿಡಿದು ತಿರುಗಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭ ಸ್ಥಳಕ್ಕೆ ಬಂದ ಬೀಟ್ ಪೊಲೀಸರ ಮೇಲೆ ರಾಯ್ ಡಿಸೋಜ ಕತ್ತಿ ಬೀಸಿದ್ದು, ಪೊಲೀಸ್ ಪೇದೆಯೊಬ್ಬರ ಕೈಗೆ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ತಾಯಿ ಹಾಗೂ ಸಹೋದರನಿಂದ ದೂರು ಮೃತರ ತಾಯಿ ಹಾಗೂ ಸಹೋದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಈ ಸಂದರ್ಭ ಮಾತನಾಡಿದ ಮೃತರ ತಾಯಿ ಮೆಟೆಲ್ಲಾ ಲೋಬೊ ಅವರು ಮಗ ಮನೆಯಿಂದ ಹೊರಹೋದ ವಿಚಾರ ನನಗೆ ತಿಳಿದಿರಲಿಲ್ಲ. ರಾತ್ರಿ ಮಗ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಎಲ್ಲಾ ಕಡೆ ವಿಚಾರಿಸಿದ್ದರೂ ಆತ ಪತ್ತೆಯಾಗಿರಲಿಲ್ಲ. ತಡ ರಾತ್ರಿ ಪೊಲೀಸರು ಮನೆಗೆ ಬಂದು ಮಗನನ್ನು ಠಾಣೆಯಿಂದ ಕರೆದೊಯ್ಯಬೇಕು ಎಂದು ತಾಖೀತು ಮಾಡಿದರು. ಮನೆಗೆ ಕರೆತಂದು ಆತನ ದೇಹ ಪರಿಶೀಲಿಸಿದಾಗ ಗಾಯಗಳಾಗಿತ್ತು. ವಿರಾಜಪೇಟೆ ವೈದ್ಯರ ಸೂಚನೆಯಂತೆ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದು, ಜೂ.12ರಂದು ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥನಿಗೆ ಮನ ಬಂದತೆ ಥಳಿಸಿ ಆತನ ಸಾವಿಗೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅಳಲು ತೋಡಿಕೊಂಡರು. ಮೃತರ ಸಹೋದರ ರಾಬಿನ್ ಡಿಸೋಜಾ ಮಾತನಾಡಿ, ಸಹೋದರನ ಸಾವಿನ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಮೃತ ದೇಹವನ್ನು ಸ್ಕ್ಯಾನಿಂಗ್ ಮಾಡಬೇಕು. ಮರಣೋತ್ತರ ಪರೀಕ್ಷೆಯ ಸಂದರ್ಭ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳೀಯ ವೈದ್ಯರಲ್ಲದೇ, ಬೇರೆ ಆಸ್ಪತ್ರೆಯಿಂದ ವೈದ್ಯರನ್ನು ಕರೆಯಿಸಿ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು. ವಿವಿದ ಸಂಘಟೆಗಳು ಹಾಗೂ ರಾಜಕೀಯ ಪಕ್ಷಗಳಿಂದ ತೀವ್ರ ಅಸಮಾಧಾನ: ಮಾನಸಿಕ ರೋಗಿಯನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ ಪೊಲೀಸರು ರಾಯ್ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಕ್ರೈಸ್ತ ಸಂಘಟನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಮಾತನಾಡಿದ ಕ್ರೈಸ್ತ ಸಮಾಜದ ಪ್ರಮುಖರಾದ ಎನ್.ಎಂ.ಡಿಸಿಲ್ವಾ, ಕೆ.ಟಿ. ಬೇಬಿ ಮ್ಯಾಥ್ಯು ಹಾಗೂ ಜಾನ್ಸನ್ ಪಿಂಟೋ ಅವರುಗಳು ಪೊಲೀಸರು ಮಾನಸಿಕ ರೋಗಿಯ ವಿರುದ್ಧ ಗೂಂಡಾ ವರ್ತನೆ ಮಾಡಿದ್ದು, ತಕ್ಷಣ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೊಡಗು ಜಿಲ್ಲಾ ಕಾಂಗ್ರೇಸ್ ವತಿಯಿಂದ ವಿರಾಜಪೇಟೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಎಸ್‌ಡಿಪಿಐ, ಜೆಡಿಎಸ್ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಪೊಲೀಸರ ದೌರ್ಜನ್ಯ ಖಂಡಿಸಿ, ಮೃತ ವ್ಕಿ÷್ತಗೆ ನ್ಯಾಯ ಒದಗಿಸುವಂತೆ ಕೋರಿಕೊಂಡಿದೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಅವರು ಖುದ್ದಾಗಿ ಮೃತ ರಾಯ್ ಡಿಸೋಜ ತಾಯಿ ಮೆಟೆಲ್ಲಾ ಲೋಬೊ ವರಿಗೆ ಕರೆ ಮಾಡಿ ಸಾಂತ್ವ ಹೇಳಿ, ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ತನಿಖೆ ಬಳಿಕ ಕ್ರಮ: ಈ ಸಾವಿನ ಪ್ರಕರಣದ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಮೃತರ ತಾಯಿ ಹಾಗೂ ಸಹೋದರ ದೂರು ನೀಡಿದ್ದಾರೆ. ಕಾನೂನು ಪ್ರಕಾರವೇ ತನಿಖೆ ನಡೆಯಲಿದೆ. ಆತ ಮಾನಸಿಕ ಕಾಯಿಲೆ ಇಂದ ಬಳಲುತ್ತಿರುವ ವಿಚಾರದ ಬಗ್ಗೆಯೂ ತನಿಖೆ ನಡೆಯಲಿದೆ. ತನಿಖೆಯ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ರಾಯ್ ಡಿಸೋಜ ಅವರಿಗೆ ಶ್ರದ್ಧಾಂಜಲಿ: ಪೊಲೀಸರ ಹಲ್ಲೆಯಿಂದ ಮೃತಪಟ್ಟ ರಾಯ್ ಡಿಸೋಜ ಅವರ ಅಂತ್ಯ ಸಂಸ್ಕಾರ ಜೂನ್ 13ರಂದು ವಿರಾಜಪೇಟೆಯಲ್ಲಿ ನಡೆಯಿತು. ಮರಣೋತ್ತರ ಪರೀಕ್ಷೆ ನಂತರ ಮೃತ ದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿತ್ತು. ಅಂತ್ಯಕ್ರಿಯೆ ಸಂದರ್ಭ ಕ್ರೈಸ್ತ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜಾನ್ಸನ್ ಪಿಂಟೋ, ಪಟ್ಟಣ ಪಂಚಾಯಿತಿ ಸದಸ್ಯ ಬೆನ್ನಿ ಅಗಸ್ಟಿನ್, ನಗರಸಭಾ ಮಾಜಿ ಸದಸ್ಯರುಗಳಾದ ಕೆ.ಜೆ.ಪೀಟರ್, ಗಿಲ್ಬರ್ಟ್ ಲೋಬೋ ಮತ್ತಿತರರು ಹಾಜರಿದ್ದು, ರಾಯ್ ಡಿಸೋಜ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ರಾಯ್ ಡಿಸೋಜ ಅವರ ಮೇಲಿನ ಹಲ್ಲೆ ಮತ್ತು ಹತ್ಯೆ ಪ್ರಕರಣವನ್ನು ಸಿಓಡಿ ತನಿಖೆಗೆ ಒಳಪಡಿಸಲಾಗಿದ್ದು, ಸರಿಯಾದ ಮತ್ತು ನೈಜ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.