DISTRICT:
ವಿಜಯಪುರ: ಕರ್ನಾಟಕ ಸೇರುವುದಾಗಿ ಗಡಿನಾಡ ಕನ್ನಡದ ಗ್ರಾಪಂಗಳು ನಿರ್ಣಯ ಅಂಗೀಕರಿಸಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಇದಕ್ಕೆ ಸೇಡಿನ ಕ್ರಮವಾಗಿ ಕನ್ನಡಿಗರು ನೆಲೆಸಿರುವ ಗ್ರಾಪಂ ವಿಸರ್ಜಿಸುವುದಾಗಿ ಬೆದರಿಕೆ ಹಾಕಿದೆ.
ಇದಕ್ಕೂ ಬಗ್ಗದ ಕನ್ನಡಿಗರು, ಗಲ್ಲು ಶಿಕ್ಷೆ ವಿಧಿಸಿದರೂ ಸರಿ ಹೋರಾಟ ಕೈ ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ 11 ಗ್ರಾಪಂಗಳು ಕರ್ನಾಟಕಕ್ಕೆ ಸೇರುವ ನಿರ್ಣಯ ಅಂಗೀಕರಿಸಿವೆ. ಇದರಿಂದಾಗಿ ಇಂಥ ಗ್ರಾಪಂಗಳನ್ನೇ ವಿಸರ್ಜಿಸುವ ಬೆದರಿಕೆ ಹಾಕಿವೆ.
ಅಲ್ಲದೇ ಗ್ರಾಪಂ ಅಧಿಕಾರಗಳನ್ನು ಸೇವೆಯಿಂದ ತೆಗೆದು ಹಾಕುವ ಎಚ್ಚರಿಕೆ ನೀಡಿದೆ. ಇದಕ್ಕೂ ಜಗ್ಗದ ಮಹಾರಾಷ್ಟ್ರದಲ್ಲಿರುವ ಗಡಿನಾಡ ಕನ್ನಡಿಗರು, ಮಹಾರಾಷ್ಟ್ರ ಸರ್ಕಾರ ಗಲ್ಲು ಶಿಕ್ಷೆ ನೀಡಿದರೂ ಸರಿ, ನಾವು ಯಾವುದಕ್ಕೂ ಹೆದರುವುದಿಲ್ಲ. ಸರಪಂಚಿಕೆ, ನೌಕರಿ ಹೋದರೂ ಸರಿ ಮೂಲ ಸೌಲಭ್ಯಗಳಿಗೆ ಆಗ್ರಹಿಸಿ ನಡೆಸಿರುವ ನಮ್ಮ ಹೋರಾಟ ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಗಡಿನಾಡ ಕನ್ನಡಿಗರ ಹಳ್ಳಿಗಳಿಗೆ ಮೂಲ ಸೌಲಭ್ಯ ಕಲ್ಪಿಸಿ ಎಂದು ಎಷ್ಟು ಬಾರಿ ಹೋರಾಟ ಮಾಡಬೇಕು. ಮೂಲ ಸೌಕರ್ಯ ಪಡೆಯುವುದು ನಮ್ಮ ಹಕ್ಕು. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಎಂಥ ತ್ಯಾಗಕ್ಕಾದರೂ ನಾವು ಸಿದ್ಧರಿದ್ದೇವೆ. ಮಹಾರಾಷ್ಟ್ರ ಸರ್ಕಾರ ನೀಡುವ ವಿಸರ್ಜನೆ ಎಚ್ಚರಿಕೆ, ಸಸ್ಪೆಂಡ್ ಮಾಡುವ ಬೆದರಿಕೆಗಳಿಗೆ ಕನ್ನಡಿಗರು ಬಗ್ಗುವವರಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.