DISTRICT:
ಬೆಂಗಳೂರು- ಬರುವ 2022-23ರ ಆಯವ್ಯಯದಲ್ಲಿ 300 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಖ್ತಾರ ಹುಸೇನ ಫಕ್ರುದೀನ್ ಪಠಾಣ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್ ನಲ್ಲಿ 55 ಕೋಟಿ ರೂಪಾಯಿ ಅನುದಾನ ನೀಡಲಾಗಿದ್ದು. ಶಿಕ್ಷಣ, ಅರಿವು ಸಾಲ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ಇನ್ನೂ 48 ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ ಎಂದರು.
ಮೂರು ಹೊಸ ಯೋಜನೆ
ಪ್ರಸಕ್ತ ವರ್ಷದಲ್ಲಿ ನಿಗಮದಿಂದ ನೂತನವಾಗಿ ಮೂರು ಯೋಜನೆಗಳನ್ನು ಜಾರಿ ತರುವ ಉದ್ದೇಶವಿದೆ. ವಿದೇಶದಲ್ಲಿ ಉನ್ನತ ವಿಧ್ಯಾಭ್ಯಾಸದ ಉದ್ದೇಶಕ್ಕೆ ಶೇ 4 ರಷ್ಟು ಸಾಲ ಸೌಲಭ್ಯ, ವಸತಿ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಸಾಲ ಸೌಲಭ್ಯ. ವ್ಯಾಪಾರ, ವಾಣಿಜ್ಯ ಕೈಗೊಳ್ಳುವ ಉದ್ದೇಶಗಳಿಗೆ 10 ಲಕ್ಷ ರೂಪಾಯಿ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಆದ್ದರಿಂದ 300 ಕೋಟಿ ರೂಪಾಯಿ ಹಣಕಾಸು ನೆರವು ನೀಡುವುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಆರ್ ಬಿ ಐ ಸ್ಪಷ್ಟನೆ ಕೇಳಿದೆ
ರಿಸರ್ವ್ ಬ್ಯಾಂಕ್ ನಿಂದ ಪಡೆಯುವ ಎನ್ ಸಿ ಇ ಎಫ್ ಸ್ಥಾನಮಾನವನ್ನು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಕಳೆದುಕೊಂಡಿದೆ ಇದರಿಂದ ನಿಗಮ ರದ್ದುಗೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗಿದೆ. ಇದು ಕೇವಲ ಊಹಾಪೋಹ. ಈ ಕುರಿತು ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ಮತ್ತು ನಿಗಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಕೆಲ ಮಾರ್ಗದರ್ಶಿ ನಿಯಮಗಳನ್ನು ಕೇಳಿ ದ್ದಾರೆ ಇದರಲ್ಲಿ ಜನರು ಆತಂಕ ಪಡುವ ಯಾವುದೇ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರಾದ ಸದ್ದಾಂ ವಜೀರ್ ಗಾಂವ್, ವ್ಯವಸ್ಥಾಪಕ ನಿರ್ದೇಶಕ ನಜೀರ್ ಫಾಷಾ ಮತ್ತಿತರರು ಹಾಜರಿದ್ದರು.