DISTRICT:
ಹಾವೇರಿ: ರೇಷ್ಮೆ ಗೂಡು ಮಾರಾಟಕ್ಕೆ ಇನ್ನುಮುಂದೆ ರೈತರು ಬೇರೆ ಜಿಲ್ಲೆಗೆ ಅಲೆಯ ಬೇಕಾಗಿಲ್ಲ. ಹಾವೇರಿ ಜಿಲ್ಲೆಯಲ್ಲೇ ಹೈಟೆಕ್ ರೇಷ್ಮೆ ಮಾರಕಟ್ಟೆ ನಿರ್ಮಿಸಲು ನಿವೇಶನ ಗುರುತಿಸಿ ವಾರದೊಳಗೆ ವರದಿ ನೀಡಿ ಎಂದು ರೇಷ್ಮೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ ಸಿ ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.
ಹಾವೇರಿ ಜಿಲ್ಲೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಹಾವೇರಿ ಅಥವಾ ರಾಣೆಬೆನ್ನೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರತಿನಿತ್ಯ ಒಂದು ಮೆಟ್ರಿಕ್ ಟನ್ ರೇಷ್ಮೆ ಗೂಡು ಮಾರಾಟವಾಗುತ್ತಿದೆ. 2-3 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನ ರಾಮನಗರ, ಶಿಡ್ಳಘಟ್ಟ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ತೀರ್ಮಾನಿಸಲಾಗಿದೆ. ವಾರದೊಳಗೆ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿ ಸರ್ವೆ ಮಾಡಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಾವೇರಿಯಲ್ಲಿ ರೇಷ್ಮೆ ಬೆಳೆ ಉತ್ತಮವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಬೇಕು. ಈ ಹಿನ್ನೆಲೆಯಲ್ಲಿ ರೇಷ್ಮೆ ತರಬೇತಿ ಕೇಂದ್ರ ಅಗತ್ಯವಿದ್ದು, ಶೀಘ್ರವೇ ಈ ಸಂಬಂಧ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.
ರೈತರ ರಕ್ತ ಕುಡಿಯುವ ಅಧಿಕಾರಿಗಳನ್ನು ಸುಮ್ಮನೆ ಬಿಡಲ್ಲ
ರೇಷ್ಮೆ ಇಲಾಖೆ ಅಡಿ ರೈತರಿಗೆ ರೇಷ್ಮೆ ಮನೆಗಳನ್ನು ನೀಡುತ್ತಿದ್ದೇವೆ. ಆದರೆ ಕೆಲ ಅಧಿಕಾರಿಗಳು ಕಮಿಷನ್ ನೀಡದೆ ಮನೆ ನೀಡುತ್ತಿಲ್ಲ. ಬಡವರಿಗೆ ನೀಡುವ ಮನೆ ಅದು. ಕಷ್ಟದಲ್ಲಿರುವ ಕಾರಣಕ್ಕೆ ಮನೆ ನೀಡುವುದು. ಆದರೆ ಅಂತವರಿಂದಲೇ ಅಧಿಕಾರಿಗಳು ಲಂಚ ಕೇಳುತ್ತಾರೆ. ಇಂತಹ ಅಧಿಕಾರಿಗಳನ್ನು ಮನೆಗೆ ಕಳಿಸುತ್ತೇನೆ. ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಾರೆ. ಡ್ರಿಪ್ ಇರಿಗೇಶನ್ ಗೂ ಕಮೀಷನ್ ಕೇಳುತ್ತಾರೆ. ಇದೆಲ್ಲದಕ್ಕು ಬ್ರೇಕ್ ಹಾಕಬೇಕು. ರೈತರ ರಕ್ತ ಕುಡಿಯುವವರನ್ನು ಬಿಡಲ್ಲ. ರೈತರಿಗೆ ಸಂಬಂಧಿಸಿದ ಯಾವುದೇ ಯೋಜನೆ ನೇರವಾಗಿ ಅವರಿಗೆ ತಲುಪಬೇಕು. ಅಧಿಕಾರಿಗಳು ಕಮಿಷನ್ ಕಾರಣಕ್ಕೆ ವಿಳಂಬ ಮಾಡಿದರೆ ಸುಮ್ಮನಿರಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.