DISTRICT:
ಪದ್ಮಶ್ರೀ ಪುರಸ್ಕೃತ, ಆಧುನಿಕ ಸೂಫಿಸಂತ ಇಬ್ರಾಹಿಂ ಸುತಾರ್ ಇಂದು ಬೆಳಗ್ಗೆ 6.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಾಗಲಕೋಟೆ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಸವಣ್ಣನವರ ಅನುಯಾಯಿಯಾಗಿದ್ದ ಇಬ್ರಾಹಿಂ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಮೂರ್ತಿಯಾಗಿದ್ದರು.
ಇಬ್ರಾಹಿಂ ಸುತಾರ್ ಎದೆ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ಮತ್ತೆ ಲಘು ಹೃದಯಾಘಾತವಾಗಿದೆ. ತಕ್ಷಣವೇ ಕುಟುಂಬ ಸದಸ್ಯರು ಅವರನ್ನ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಇಬ್ರಾಹಿಂ ಕೊನೆಯುಸಿರೆಳೆದಿದ್ದಾರೆ. ಸುತಾರ್ ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕನ್ನಡದ ಕಬೀರ ಎಂದೇ ಖ್ಯಾತ ಘಳಿಸಿದ ಇಬ್ರಾಹಿಂ ಸುತಾರ್ ಅವರಿಗೆ 1995ರಲ್ಲಿ ಕರ್ನಾಟಕ ಸರ್ಕಾರ ರಾಜೋತ್ಸವ ಪ್ರಶಸ್ತಿ ನೀಡಿದೆ. ಜೊತೆಗೆ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
ಸೂಫಿಸಂತ ಇಬ್ರಾಹಿಂ ನಿಧನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಇಂದು ಇಬ್ರಾಹಿಂ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಸಂತರು. ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ. ನೋವು ಭರಿಸುವ ಶಕ್ತಿ ಕುಟುಂಬದವರಿಗೆ ದೇವರು ಕರುಣಿಸಲಿ ಎಂದರು.
ಸಾಮರಸ್ಯದ ಕೊಂಡಿ, ಸೌಹಾರ್ದ ಸಮಾಜದ ಪ್ರತಿಪಾದಕರು, ಪದ್ಮಶ್ರೀ ಪುರಸ್ಕೃತರಾಗಿದ್ದ ಕನ್ನಡದ ಕಬೀರ ಇಬ್ರಾಹಿಂ ಸುತಾರ ಅವರ ನಿಧನ ತೀವ್ರ ದುಃಖ ಉಂಟು ಮಾಡಿದೆ. ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ. ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ಕರುಣಿಸಲು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.