DISTRICT:
ಕೊಡಗು: ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಸರಹದ್ದಿನ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಪ್ರಭಾರವರ ಮೊಬೈಲ್ ಫೋನ್ ಕಾಣೆಯಾಗಿದ್ದ ಬಗ್ಗೆ ಪತಿ ನವೀನ್ ರವರು ತಮ್ಮ ಪತ್ನಿಯ ಮರಣದ ನಂತರ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಅಲ್ಲದೆ ಮಡಿಕೇರಿಯಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋಧಕ ಆಸ್ಪತ್ರೆ, ಮಡಿಕೇರಿಯ ಡೀನ್ ಹಾಗೂ ನಿರ್ದೇಶಕರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಮೃತ ಪ್ರಭಾ ರವರ ಮಗಳಾದ ಹೃತಿಕ್ಷಾ ರವರು ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಾಯಿಯ ಮೊಬೈಲ್ ಫೋನನ್ನು ಪತ್ತೆ ಮಾಡಿಕೊಡಬೇಕೆಂದು ಸಂದೇಶ ರವಾನಿಸಿದ ಮೇರೆಗೆ ಈ ವಿಚಾರವು ದೇಶದಾದ್ಯಂತ ಸುದ್ದಿಯಾಗಿತ್ತು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಆಗಸ್ಟ್ 10ರಂದು ಮಡಿಕೇರಿಯಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಖ್ಯೆ, ಭೋಧಕ ಆಸ್ಪತ್ರೆ, ಮಡಿಕೇರಿಯ ಶೂಶ್ರುಷಕ ಅಧೀಕ್ಷಕರವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ಒಂದು ಸ್ಯಾಮ್‌ಸಂಗ್ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಫೋನನ್ನು ವರದಿಯೊಂದಿಗೆ ಹಾಜರುಪಡಿಸಿದ್ದು, ಸದರಿ ವರದಿಯಲ್ಲಿ ಮೊಬೈಲ್ ಫೋನ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೌಂಟರ್-2 ರ ದಾಸ್ತಾನು ಕೊಠಡಿಯಲ್ಲಿ ದೊರೆತಿರುವುದಾಗಿ ನಮೂದಿಸಿರುತ್ತಾರೆ.
ಈ ಸ್ಯಾಮ್‌ಸಂಗ್ ಕಂಪೆನಿಯ ಆಂಡ್ರಾಯ್ಡ್ ಮೊಬೈಲ್ ಫೋನನ್ನು ಪರಿಶೀಲಿಸಲಾಗಿ ಸದರಿ ಸ್ಯಾಮ್‌ಸಂಗ್ ಮೊಬೈಲ್ ಫೋನಿನಲ್ಲಿ ಪ್ರಭಾ ಹಾಗೂ ಆಕೆಯ ಮಗಳಾದ ಹೃತಿಕ್ಷಾಳ ಭಾವಚಿತ್ರಗಳು ಇರುವುದು ಕಂಡು ಬಂದಿದೆ. ಈ ಮೊಬೈಲ್ ಫೋನ್ IMEI ಸಂಖ್ಯೆಯನ್ನು ಪರಿಶೀಲಿಸಿದಾಗ ಮೊಬೈಲ್ ಪ್ರಬಾ ಅವರಿಗೆ ಸೇರಿದ್ದು ಎಂದು ಧೃಡಪಟ್ಟಿರುತ್ತದೆ. ಆದ್ದರಿಂದ ಮೊಬೈಲ್ ಫೋನನ್ನು ಮೃತ ಪ್ರಭಾ ಅವರ ಮಗಳಾದ ಕುಮಾರಿ ಹೃತಿಕ್ಷಾಳಿಗೆ ಹಿಂದುರಿಗಿಸಲಾಗಿದೆ.