DISTRICT: ಬಾಗಲಕೋಟೆ: ಬಾದಾಮಿಯಲ್ಲಿ ಪರವಾನಗಿ ಪಡೆಯದೇ ಕೃಷಿ ಪರಿಕರ ಮಾರಾಟ ಮಾಡುತ್ತಿದ್ದ ಕೇಂದ್ರದ ಮೇಲೆ ಜಾರಿದಳದ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಜಾರಿ ದಳದ ಸತೀಶ ಮಾವಿನಕೊಪ್ಪ ಹಾಗೂ ಸಹಾಯಕ ಕೃಷಿ ನಿರ್ದೇಶಕ ಬಸವರಾಜ ಮಾಳೆದ, ಕೃಷಿ ಅಧಿಕಾರಿ ಮಹೇಶ್ ಕಟಗೇರಿ ಇವರ ನೇತೃತ್ವದ ತಂಡ ತಾಲೂಕಿನಲ್ಲಿರುವ ಕೃಷಿ ಪರಿಕರ ಮಾರಾಟ ಮಾಡುವ ಮಳಿಗೆಗಳಿಗೆ ದಿಢೀರ್ ದಾಳಿ ಮಾಡಿ ತಪಾಸಣೆ ನಡೆಸಿದಾಗ ಬಾದಾಮಿ ಪಟ್ಟಣದ ಶ್ರೀ ಮಲ್ಲಿಕಾರ್ಜುನಟ್ರೇಡಿಂಗ್ ಕಂಪನಿ ಕೀಟನಾಶಕ ಮಾರಾಟ ಪರವಾನಗಿ ಪಡೆಯದೆ ಕೀಟನಾಶಕ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಮಾರಾಟ ಮಳಿಗೆಯಲ್ಲಿ ದಾಸ್ತಾನಿದ್ದ ೨ಲಕ್ಷ ೧೭ಸಾವಿರ ಮೌಲ್ಯದ ೭೯.೫೫ಲೀಟರ್ ಹಾಗೂ ೫೧.೦೭ ಕೇಜಿ ಕೀಟನಾಶಕವನ್ನು ಜಪ್ತಿ ಮಾಡಿ, ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಇನ್ನು ಮುಂದೆ ಯಾವುದೇ ಕೃಷಿ ಪರಿಕರ ಮಾರಾಟಗಾರರು ಅನಧಿಕೃತ ದಾಸ್ತಾನು ಮಾಡುವುದಾಗಲಿ ಹಾಗೂ ನಿಯಮ ಉಲ್ಲಂಘಣೆ ಮಾಡಿ ಮಾರಾಟ ಕಂಡು ಬಂದರೆ ಕಾನೊನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮು ಪ್ರಾರಂಭವಾದ ಹಿನ್ನಲೆಯಲ್ಲಿ ಬಾದಾಮಿ ಹಾಗೂ ತಾಲೂಕಿನ ಕುಳಗೇರಿ, ಕೆರೂರ ಗುಳೇದಗುಡ್ಡ ರೈತ ಸಂಪರ್ಕ ಕೇಂದ್ರಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜವನ್ನು ದಾಸ್ತಾನುಕರಿಸಿ, ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಪ್ರಸ್ತುತ ತಾಲೂಕಿನಲ್ಲಿ ಹೆಸರು ೭೮.೦೦ ಕ್ವಿಂಟಾಲ್, ತೊಗರಿ ೨೫.೨೦ ಕ್ವಿಂಟಾಲ್, ಮುಸುಕಿನ ಜೋಳ ೨೬೭.೨೩ ಕ್ವಿಂಟಾಲ್, ಸಜ್ಜೆ ೫೧.೫೨ ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಮಾಡಲಾಗಿದೆ. ಹೆಸರು ಬೆಳೆಯ ಬಿತ್ತನೆ ಬೀಜದ ೫ ಕೀಲೋ ಪ್ಯಾಕೇಟ್ ಗೆ ಸಾಮಾನ್ಯ ರೈತರಗೆ ರೂ. ೪೯೫/- ಪ.ಜಾ/ಪ.ಪಂ. ರೈತರಿಗೆ ರೂ. ೪೩೫/-, ತೊಗರಿ ೫ ಕೀಲೋ ಪ್ಯಾಕೇಟ್ ಗೆ ಸಾಮಾನ್ಯ ರೈತರಗೆ ರೂ. ೪೦೦/- ಪ.ಜಾ/ಪ.ಪಂ. ರೈತರಿಗೆ ರೂ. ೩೩೭.೫೦, ಬಿತ್ತನೆ ಬೀಜವನ್ನು ಎಲ್ಲಾ ವರ್ಗದ ರೈತರಿಗೆ ಗರಿಷ್ಟ ೨.೦ ಹೆಕ್ಟೇರ್ ಅಥವಾ ಅವರ ವಾಸ್ತವಿಕ ಹಿಡವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಬೇಕಾವಷ್ಟು ವಿತರಣೆ ಮಾಡಲಾಗುವುದು. ಸರಕಾರ ಮತ್ತು ಜಿಲ್ಲಾಡಳಿತ ನಿಗದಪಡಿಸಿದ ಸಮಯಲ್ಲಿಯೇ ಚಾಲ್ತಿ ಮಾರ್ಗಸೂಚಿಯ ಪ್ರಕಾರ ಜೂನ್ ೭ ರೊಳಗೆ ಬೆಳಿಗ್ಗೆ ೬.೦೦ ರಂದ ೧೦.೦೦ ಗಂಟೆಯವರೆಗೆ ತಮಗೆ ಸಂಬಂಧಿಸಿದ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಆಧಾರ ಕಾರ್ಡಿನ ಪ್ರತಿಯೊಂದಿಗೆ ಕೋವಿಡ್-೧೯ ಮಾರ್ಗಸೂಚಿಗಳನ್ನು ಪಾಲಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಬಿತ್ತನೆ ಬೀಜವನ್ನು ಪಡೆದುಕೊಳ್ಳಬೇಕೆಂದು ತಾಲೂಕಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಆರ್.ನಾಗೂರ ತಿಳಿಸಿದ್ದಾರೆ.