DISTRICT: ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ಕೂರಣಗೆರೆ ಗ್ರಾಮದ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದು, ಅಕ್ರಮ ಹಾಗೂ ಅವೈಜ್ಞಾನಿಕವಾಗಿ ಮಣ್ಣುತೆಗೆಯುತ್ತಿದ್ದಾರೆಂದು ಸಮಾಜ ಸೇವಕ ಕೃಷ್ಣಪ್ಪ ನವರ ನೇತೃತ್ವದಲ್ಲಿ ಗ್ರಾಮಸ್ಥರು ಇತ್ತೀಚಿಗೆ ಕೆರೆಗೆ ಇಳಿದು ಪ್ರತಿಭಟಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಸೀಲ್ದಾರ್ ನಾಗೇಶ್ ಸರ್ವೇ ಮಾಡಿಸಿ ವರದಿ ನೀಡಿದ್ದಾರೆ. ಹನ್ನೊಂದು ಎಕರೆ ಇಪ್ಪತ್ತೊಂದು ಗುಂಟೆ ಪ್ರದೇಶದ ಈ ಕೆರೆಯನ್ನು ಐದಾರು ಎಕರೆಯಷ್ಟನ್ನು, ಅಕ್ಕಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡಿದ್ದು, ಮೋಜಿಣಿಯವರ ಮೂಲಕ ಸರ್ವೇ ಮಾಡಿಸಿ, ಒತ್ತುವರಿ ಜಮೀನಿನಲ್ಲಿರುವ ಬೆಳೆಯನ್ನು ಶೀಘ್ರವಾಗಿ ಕಟಾವು ಮಾಡಿಕೊಂಡು, ತೆರವು ಮಾಡಿಕೊಡುವಂತೆ ಒತ್ತುವರಿದಾರರಿಗೆ ಸೂಚಿಸಿದ್ದು, ಬಹುತೇಕ ಒತ್ತುವರಿಯನ್ನು ಜೆಸಿಬಿ ಮೂಲಕ ತಹಶಿಲ್ದಾರ್ ರವರೇ ಖುದ್ದು ನಿಂತು ತೆರವುಗೊಳಿಸಿದರು. ಗ್ರಾಮ ಪಂಚಾಯತಿ ಪಿಡಿಓ ಮಣ್ಣನ್ನು ತೆಗೆಯಲು ಈ ಹಿಂದೆ ಅನುಮತಿ ನೀಡಿದ್ದು, ಅದನ್ನೇ ದುರುಪಯೋಗ ಪಡಿಸಿಕೊಂಡ ಕೆಲ ಸ್ಥಳೀಯರು ಅವೈಜ್ಞಾನಿಕವಾಗಿ ಮಣ್ಣು ತೆಗೆದಿರುವುದು ಗಮನಕ್ಕೆ ಬಂದಿದೆ. ಅವರಿಗೂ ಸಹ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕೆರೆಯನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಜರಿದ್ದರು.