DISTRICT:
ಕಲಬುರಗಿ: ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಹೆತ್ತ ತಾಯಿಯನ್ನೇ ಮಗನೋರ್ವ ಭೀಮಾನದಿಯಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಲತಾಃ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದ ರಾಚ್ಚಮ್ಮ ಯಳಮೇಲಿ (60) ಕೊಲೆಯಾದ ಮಹಿಳೆ. ಈಕೆಯ ಮಗ ಭೀಮಾಶಂಕರ ಹಾಗೂ ಈತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಪುತ್ರನಿಂದಲೇ ಹತ್ಯೆಗೊಳಗಾದ ರಾಚಮ್ಮ ವಯೋಸಹಜ ಖಾಯಿಲೆಯಿಂದ ನರಳುತ್ತಿದ್ದರು. ಆಸ್ಪತ್ರೆಗೆ ತೋರಿಸಿದರೂ ಚೇತರಿಸಿಕೊಂಡಿರಲಿಲ್ಲ. ಈ ನಡುವೆ ಮತ್ತೆ ರಾಚಮ್ಮ ಅನಾರೋಗ್ಯದಿಂದ ಬಳಲಿದ್ದು, ಇದರಿಂದ ಬೇಸತ್ತ ಮಗ ಭೀಮಾಶಂಕರ ತನ್ನ ಸ್ನೇಹಿತನ ಸಹಾಯ ಪಡೆದು ಬೈಕ್ ಮೇಲೆ ಕಳೆದ ಮಾರ್ಚ್ 29 ರಂದು ಆಸ್ಪತ್ರೆಗೆ ಕರೆದೊಯ್ಯುವುದಾಗಿ ರಾಚಮ್ಮಳನ್ನು ಕರೆದೊಯ್ದಿದ್ದರು. ಬಳಿಕ ಯಾದಗಿರಿ ಜಿಲ್ಲೆಯ ಶಿರವಾಳ ಸಮೀಪದ ಭೀಮಾನದಿಯಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆಗೈದು ಗ್ರಾಮಕ್ಕೆ ಮರಳಿದ್ದರು.
ನಂತರ ಶವ ತೇಲಿ ಬಂದಾಗ ಭೀಮರಾಯನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವದ ಬಗ್ಗೆ ಪತ್ತೆ ಮಾಡಿದ ಪೊಲೀಸರು ಸಂಶಯದ ಮೇಲೆ ಮಗನನ್ನು ಕರೆತಂದು ತಮ್ಮದೆ ದಾಟಿಯಲ್ಲಿ ವಿಚಾರಣೆ ನಡೆಸಿದಾಗ ಹೆತ್ತವ್ವಳ ಕೊಲೆ ತಾನೇ ಮಾಡಿದ್ದಾಗಿ ಭೀಮಾಶಂಕರ ಒಪ್ಪಿಕೊಂಡಿದ್ದಾನೆ.