'ಕಾಂತಾರ' ಸಿನಿಮಾ ನೋಡಲಿರುವ ವೀರೇಂದ್ರ ಹೆಗ್ಗಡೆ

'ಕಾಂತಾರ' ಸಿನಿಮಾ ನೋಡಲಿರುವ ವೀರೇಂದ್ರ ಹೆಗ್ಗಡೆ

ಹಲವು ಕಾರಣದಿಂದ 'ಕಾಂತಾರ' ಚಿತ್ರದ ಬಗ್ಗೆ ಚರ್ಚೆ ಆಗುತ್ತಿದೆ. ವೀರೇಂದ್ರ ಹೆಗ್ಗಡೆ ಅವರು ಈ ಸಿನಿಮಾ ನೋಡಿದ ಬಳಿಕ ಏನು ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಎಲ್ಲರೂ ಕಾದಿದ್ದಾರೆ.

ಎಲ್ಲ ಕ್ಷೇತ್ರದವರನ್ನೂ 'ಕಾಂತಾರ'  ಸಿನಿಮಾ ಆಕರ್ಷಿಸಿದೆ.

ಪರಭಾಷೆ ಮಂದಿ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಹಲವು ಆಯಾಮಗಳಿಂದ ಈ ಸಿನಿಮಾವನ್ನು ನೋಡಲಾಗುತ್ತಿದೆ. ಪ್ರಭಾಸ್​, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್​ ಸೇರಿದಂತೆ ಹಲವರು ತಮ್ಮ ಪ್ರಶಂಸೆ ವ್ಯಕ್ತಪಡಿಸಿದ್ದಾಗಿದೆ. ಈಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗೆಡೆ  ಅವರು ಕೂಡ 'ಕಾಂತಾರ' ನೋಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.

ಇಂದು (ಅ.21) ಸಂಜೆ 7 ಗಂಟೆಗೆ ಮಂಗಳೂರಿನ ಪ್ರಭಾತ್​ ಚಿತ್ರಮಂದಿರದಲ್ಲಿ ಕುಟುಂಬ ಸಮೇತರಾಗಿ ಸಿನಿಮಾ ವೀಕ್ಷಿಸಲಿದ್ದಾರೆ. ಚಿತ್ರ ನೋಡಿದ ಬಳಿಕ ಅವರು ಯಾವ ರೀತಿಯ ಅಭಿಪ್ರಾಯ ತಿಳಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹೆಚ್ಚಿದೆ. ರಿಷಬ್​ ಶೆಟ್ಟಿ  ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿಬಂದಿರುವ ಈ ಚಿತ್ರ ಹಲವು ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಇತ್ತೀಚೆಗೆ 'ಕಾಂತಾರ' ಸಿನಿಮಾ ಬಗ್ಗೆ ಬೇರೊಂದು ರೀತಿಯ ಚರ್ಚೆ ಶುರುವಾಗಿತ್ತು. ಈ ಚಿತ್ರದಲ್ಲಿ ತೋರಿಸಲಾದ ಭೂತಕೋಲವು ಹಿಂದು ಧರ್ಮಕ್ಕೆ ಸೇರಿದ್ದಲ್ಲ ಎಂದು 'ಆ ದಿನಗಳು' ಚೇತನ್​ ಅವರು ತಕರಾರು ತೆಗೆದಿದ್ದರು. ಆ ಕುರಿತು ಪರ-ವಿರೋಧದ ಚರ್ಚೆ ಹುಟ್ಟಿಕೊಂಡಿತ್ತು. ದೈವ ನರ್ತಕರು, ಧಾರ್ಮಿಕ ಮುಖಂಡರು, ಭಕ್ತರು ಸೇರಿದಂತೆ ಅನೇಕರು ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ವೀರೇಂದ್ರ ಹೆಗ್ಗಡೆ ಅವರು ತಿಳಿಸಲಿರುವ ಅಭಿಪ್ರಾಯ ತುಂಬ ಮುಖ್ಯವಾಗಲಿದೆ.