DISTRICT: ಚಿಕ್ಕಮಗಳೂರು: ಕೊಟ್ಟಿಗೆಯಲ್ಲಿದ್ದ ಹಸುಗಳು ರಾತ್ರೋರಾತ್ರಿ ಕಳುವಾಗಿದ್ದರಿಂದ ಮಹಿಳೆಯೋರ್ವರು ಕಣ್ಣೀರಿಡುತ್ತಿರುವ ಮನಕಲಕುವ ಘಟನೆ ಮೂಡಿಗೆರೆ ತಾಲೂಕಿನ ಕೂಡಹಳ್ಳಿ ಎಂಬಲ್ಲಿ ನಡೆದಿದೆ. ಕೂಡಹಳ್ಳಿಯ ಸತೀಶ್ ದಂಪತಿಗಳು 2 ಹಸುಗಳನ್ನು ತಂದು ಸಾಕಿದ್ದರು. 15 ಲೀ. ಹಾಲು ಕೊಡುತ್ತಿದ್ದವು. ಈ ಎರಡು ಹಸುಗಳೇ ಇವರ ಜೀವನಾಧಾರವಾಗಿದ್ದವು. ಒಂದೆಡೆ ಕೋವಿಡ್ ಲಾಕ್ಡೌನ್ನಿಂದ ಆರ್ಥಿಕವಾಗಿ ಕಂಗೆಟ್ಟಿದ್ದ ಕುಟುಂಬ ಯಾವುದೇ ಆದಾಯವಿಲ್ಲದೆ ಕಂಗಾಲಾಗಿದೆ. “ಹಸುಗಳನ್ನು ಕಷ್ಟಪಟ್ಟು ಸಾಕಿರುತ್ತೇವೆ. ಇದ್ದಕ್ಕಿದ್ದಂತೆ ಮಾಯವಾದರೆ ನಾವು ಏನು ಮಾಡಬೇಕು ಎಂಬದೇ ತಿಳಿಯದಂತಾಗಿದೆ. ಒಂದು ಹಸು ತರಬೇಕೆಂದರೆ 50-60 ಸಾವಿರ ರೂಪಾಯಿ ಬೇಕು. ಹಸುಗಳ ಸಾಕಣೆ ಎಷ್ಟು ಕಷ್ಟವಿದೆ ಎಂಬುದು ನಮಗೆ ಗೊತ್ತು. ಹಸು ಕೊಡುತ್ತಿದ್ದ ಹಾಲಿನಿಂದ ನಾವು ಜೀವನ ಸಾಗಿಸುತ್ತಿದ್ದೆವು” ಎಂದು ಮಹಿಳೆ ಅಳಲು ತೋಡಿಕೊಂಡರು. ಲಾಕ್ಡೌನ್ನಲ್ಲಿ ಜಾನುವಾರು ಕಳ್ಳರು ಅಧಿಕವಾಗಿದ್ದಾರೆ. ಮನೆಯ ಹೊರಗಿದ್ದ ಅನೇಕ ವಸ್ತುಗಳು ಕಳ್ಳರ ಪಾಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.