NEWS:
ಬೆಂಗಳೂರು : ಪಶ್ಚಿಮಘಟ್ಟ ಪ್ರದೇಶದಲ್ಲಿ ಹರಿಯುವ ನದಿಗಳಿಗೆ ಅಲ್ಲಲ್ಲಿ ಚಿಕ್ಕ ಚಿಕ್ಕ ಡ್ಯಾಂಗಳನ್ನು ನಿರ್ಮಾಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ಮೂರ್ಖ ಮತ್ತು ಅವೈಜ್ಞಾನಿಕ ಯೋಜನೆ ಎಂದು ಆರೋಪಿಸಿದ್ದಾರೆ.
ಈಗಾಗಲೇ 1400 ಕಡೆಗಳಲ್ಲಿ ಚಿಕ್ಕ ಚಿಕ್ಕ ಡ್ಯಾಂಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಪ್ರಾರಂಭಿಕ ಹಂತವಾಗಿ 3900 ಕೋಟಿ ರೂಪಾಯಿ ಮೀಸಲಿಡಲು ನಿರ್ಧರಿಸಿದೆ. ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಒಂದು ಹೆಜ್ಜೆ ಮುಂದೆ ಹೋಗಿ ಈ ಯೋಜನೆಗೆ ನೆರವು ನೀಡುವಂತೆ ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನದಿಗಳು ಸಮುದ್ರ ಸೇರುವ ಸ್ಥಳದಲ್ಲಿ ನೀರು ಸಂಗ್ರಹ ಮಾಡುವ ಉದ್ದೇಶದಿಂದ ಸಣ್ಣ ಸಣ್ಣ ಅಣೆಕಟ್ಟುಗಳನ್ನು ನಿರ್ಮಾಣ ಮಾಡಲಾಗುವುದು. ಈ ಮೂಲಕ ನೀರು ಪೋಲಾಗುವುದನ್ನು ತಪ್ಪಿಸಬೇಕೆಂಬ ಉದ್ದೇಶ ಎನ್ನುವುದು ಸರ್ಕಾರದ ವಾದ.
ಪರಿಸರವಾದಿಗಳು ಏನೆನ್ನುತ್ತಾರೆ…?
ಇನ್ನು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಈ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಪರಿಸರವಾದಿಗಳ ಕಣ್ಣು ಕೆಂಪಾಗಿಸಿದೆ. ಇಂತಹ ಯೋಜನೆಗಳಿಂದ ಹಣ ದುರ್ಬಳಕೆ ಆಗುತ್ತದೆ ಅಷ್ಟೇ ಎಂದ ಹೇಳುತ್ತಾರೆ.
ಪರಿಸರ ಹೋರಾಟಗಾರ ಅಖಿಲೇಶ್ ಚಿಪ್ಪಳಿ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ನದಿಗಳ ಮೂಲ, ಹರಿಯುವಿಕೆ ಹಾಳು ಮಾಡುವಂಥದ್ದು. ಚಿಕ್ಕ ಚಿಕ್ಕ ಡ್ಯಾಂಗಳ ನಿರ್ಮಾಣ ಮಾಡುವುದರಿಂದ ಜಮೀನು, ಅರಣ್ಯ ನಾಶ, ಬೆಲೆಬಾಳುವ ಮರಗಳು, ಔಷಧೀಯ ಸಸ್ಯಗಳ ಗುಣವುಳ್ಳ ಗಿಡಮೂಲಿಕೆಗಳು ನಾಶವಾಗಲಿದೆ. ಹಾಗಾಗಿ ಇದೊಂದು ಅವೈಜ್ಞಾನಿಕ ಹಾಗೂ ಮೂರ್ಖತನದಿಂದ ಕೂಡಿದ್ದಾಗಿದೆ. ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ ಏನೂ ಪ್ರಯೋಜನ ಆಗಿಲ್ಲ. ಆದರೆ, ಈಗ ಪಶ್ಚಿಮ ಘಟ್ಟದಿಂದ ಹರಿಯುವ ನದಿಗಳ ಒಡಲಿಗೆ ಕೈ ಹಾಕಿರುವ ಸರ್ಕಾರ ವನ್ಯಜೀವಿಗಳ ಸಂತತಿ ಮಾರಣಹೋಮಕ್ಕೆ ಮುಂದಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ 1400 ಕಡೆ ಜಾಗ ಗುರುತಿಸಿದೆಯಾದರೂ ಹಣ ವ್ಯಯ ಮಾಡಿ ಜೇಬು ತುಂಬಿಸಿಕೊಳ್ಳುವುದೇ ಆಗಿದೆ. ಈಗಿರುವ ಯೋಜನಾ ಗಾತ್ರ 30 ಸಾವಿರ ಕೋಟಿ ರೂಪಾಯಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಇಂಥ ಯೋಜನೆಗಳನ್ನು ಸರ್ಕಾರ ಮಾಡಲೇಬಾರದು. ಅನುಷ್ಠಾನಕ್ಕೆ ಮುಂದಾದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಸಮುದ್ರಕ್ಕೆ ಸೇರುವ ನೀರು ಬಳಕೆ ಮಾಡಿಕೊಳ್ಳುವ ಉದ್ದೇಶದ ಯೋಜನೆ ಎಂಬುದೇ ಅವಾಸ್ತವಿಕ ಮತ್ತು ಯಾರೂ ಒಪ್ಪುವಂಥದ್ದಲ್ಲ. ವಿರೋಧ ಪಕ್ಷಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಬೀದಿಗಿಳಿಯಬೇಕು. ಈ ಮೂಲಕ ಪಶ್ಚಿಮಘಟ್ಟದ ಪರಿಸರ ಉಳಿಸಲು ಪಣ ತೊಡಬೇಕು ಎಂದು ಅಖಿಲೇಶ್ ಅವರು ಹೇಳಿದ್ದಾರೆ.