SPORTS: ಸೋಮಶೇಖರ್ ಪಡುಕರೆ, ಬೆಂಗಳೂರು ಕೊರೋನಾ ಸಾಂಕ್ರಮಿಕ ರೋಗದ ಎರಡನೇ ಅಲೆಯಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದಂತೆ ಕ್ರಿಕೆಟ್ ನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಇಂಗ್ಲೆಂಡ್ ನ ಸೌಥ್ ಹ್ಯಾಂಪ್ಟನ್ ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿದೆ. ಇದು ಟೆಸ್ಟ್ ಕ್ರಿಕೆಟ್ ನ ಚೊಚ್ಚಲ ವಿಶ್ವಕಪ್ ಎಂದೇ ಕರೆಯಲ್ಪಟ್ಟಿದ್ದು, ಭಾರತ ಗೆಲ್ಲುವ ಫೇವರಿಟ್ ಎನಿಸಿದೆ. ಏಕದಿನ ಮತ್ತು ಟಿ20 ಕ್ರಿಕೆಟ್ ಗಳ ನಡುವೆ ಟೆಸ್ಟ್ ಕ್ರಿಕೆಟನ್ನು ಜನಪ್ರಿಯಗೊಳಿಸುವುದು ಹೇಗೆ ಎಂದು ಯೋಚಿಸುತ್ತಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಗೆ ಸಿಕ್ಕಿದ ಹೊಸ ಯೋಜನೆಯೇ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್. ಭಾರತ ಫೈನಲ್ ತಲುಪಿದ್ದು ಹೇಗೆ? ಕಳೆದ ಎರಡು ವರ್ಷಗಳ ಅವಧಿಯಲ್ಲಿ ಟೆಸ್ಟ್ ಪಂದ್ಯಗಳನ್ನಾಡುವ 12 ರಾಷ್ಟ್ರಗಳಲ್ಲಿ 9 ರಾಷ್ಟ್ರಗಳ ನಡುವೆ ಸ್ಪರ್ಧೆ ನಡೆದಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ನಿಯಮಗಳಲ್ಲಿ ಕೊಂಚ ಬದಲಾವಣೆಯನ್ನೂ ತರಲಾಗಿತ್ತು. 2019ರಲ್ಲಿ ಆರಂಭಗೊಂಡ ಈ ಟೆಸ್ಟ್ ಹೋರಾಟದಲ್ಲಿ ಭಾರತ ತಂಡ ಸ್ವದೇಶಿ ಮತ್ತು ವಿದೇಶಿ ನೆಲದಲ್ಲಿ ಸೇರಿ ಒಟ್ಟು ಆರು ಟೆಸ್ಟ್ ಪಂದ್ಯಗಳನ್ನು ಆಡಿತ್ತು. ಅದರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾತ್ರ ಸೋಲನುಭವಿಸಿತ್ತು. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧದ ಪ್ರವಾಸದಲ್ಲಿ ನ್ಯೂಜಿಲೆಂಡ್ ಹೊರತಾಗಿ ಇತರ ಎರಡು ರಾಷ್ಟ್ರಗಳ ವಿರುದ್ಧ ಸರಣಿ ಗೆದ್ದಿತ್ತು. ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಭಾರತಕ್ಕೆ ವಿಶ್ವಟೆಸ್ಟ್ ಫೈನಲ್ ತಲುಪಿಸುವ ಅವಕಾಶವನ್ನು ಉತ್ತಮಗೊಳಿಸಿತು. ನಂತರ ಇಂಗ್ಲೆಂಡ್ ವಿರುದ್ಧ ಮನೆಯಂಗಣದಲ್ಲಿ ಕಂಡ ಯಶಸ್ಸು ಭಾರತವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ದಿತು. ನಂತರ ಇಂಗ್ಲೆಂಡ್ ವಿರುದ್ಧ ಜಯ ಗಳಿಸುವ ಮೂಲಕ ನ್ಯೂಜಿಲೆಂಡ್ ಫೈನಲ್ ಪ್ರವೇಶಿಸಿತು. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕೋವಿಡ್ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ನಿರಾಕರಿಸಿದ್ದು ಆ ತಂಡ ಪಟ್ಟಿಯಲ್ಲಿ ಹಿನ್ನಡೆ ಕಾಣಲು ಮತ್ತೊಂದು ಕಾರಣವಾಯಿತು. ಯಾರು ಫೇವರಿಟ್? ಭಾರತದ ಕ್ರಿಕೆಟ್ ಅಭಿಮಾನಿಯಾಗಿ ಭಾರತ ಫೇವರಿಟ್ ಅನ್ನುವುದು ಸಹಜ, ಆದರೆ ಸೌಥ್ ಹ್ಯಾಂಪ್ಟನ್ ನ್ಯೂಜಿಲೆಂಡ್ ನ ಸಾಮರ್ಥ್ಯಕ್ಕೆ ಸೂಕ್ತವೆನಿಸಿದ ಪಿಚ್. ಇದು ಬೌಲರ್ ಗಳ ಟೆಸ್ಟ್ ಎಂದರೆ ಅತಿಶಯೋಕ್ತಿಯಾಗಲಾರದು. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗಾಗಿ ಪಂದ್ಯಗಳು ನಡೆದಾಗಿನಿಂದ ಭಾರತದ ಅಜಿಂಕ್ಯ ರಹಾನೆ 1,095 ರನ್ ಗಳಿಸಿದ್ದು ಇದರಲ್ಲಿ ಮೂರು ಶತಕ ಹಾಗೂ 6 ಅರ್ಧ ಶತಕ ಸೇರಿದೆ. ರೋಹಿತ್ ಶರ್ಮಾ (1030) ಮತ್ತು ವಿರಾಟ್ ಕೊಹ್ಲಿ (877) ಬ್ಯಾಟಿಂಗ್ ನಲ್ಲಿ ಮಿಂಚಿದ ಇತರ ಆಟಟಗಾರರು. ವಿಕೆಟ್ ಗಳಿಕೆಯಲ್ಲಿ ಸ್ಪಿನ್ ಬೌಲರ್ ಮುಂಚೂಣಿಯಲ್ಲಿದ್ದು, ರವಿಚಂದ್ರನ್ ಅಶ್ವಿನ್ (67) ಅಗ್ರ ಸ್ಥಾನದಲ್ಲಿದ್ದಾರೆ, ಆದರೆ ಇಂಗ್ಲೆಂಡ್ ನೆಲದ ಪಿಚ್ ನಲ್ಲಿ ಸ್ಪಿನ್ ಬೌಲರ್ ಗಳು ಯಾವ ರೀತಿಯಲ್ಲಿ ಯಶಸ್ಸು ಕಾಣುತ್ತಾರೆ ಎಂಬುದು ಮುಖ್ಯ. ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಸೇರಿ ಭಾರತ ಐವರು ಬೌಲರ್ ಗಳಿಗೆ 15 ಆಟಗಾರರ ಅಂತಿಮ ಪಟ್ಟಿಯಲ್ಲಿ ಅವಕಾಶ ನೀಡಿದೆ. ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಕೈ ಬಿಟ್ಟಿರುವುದು ಅಚ್ಚರಿಯ ಸಂಗತಿ. ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ 817 ರನ್ ಗಳಿಸಿದ್ದು ವಿಶ್ವ ಟೆಸ್ಟ್ ಸರಣಿಯಲ್ಲಿ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ್ದಾರೆ. ಅದರಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ ಟಾಮ್ ಲಥಾಮ್ 11 ಪಂದ್ಯಗಳನ್ನಾಡಿ 680 ರನ್ ಗಳಿಸಿದ್ದು, 1 ಶತಕ ಮತ್ತು 5 ಅರ್ಧ ಶತಕ ಸೇರಿದೆ. ವಿಕೆಟ್ ಗಳಿಕೆಯಲ್ಲಿ ವೇಗಿ ಟಿಮ್ ಸೌಥಿ (51 ವಿಕೆಟ್) ಮತ್ತು ಕೇಯ್ಲ್ ಜಾಮೆಸನ್ (36) ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಗಳು. ಹಿಂದಿನ ಟೆಸ್ಟ್ ದಾಖಲೆಗಳನ್ನು ಗಮನಿಸಿದಾಗ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಪ್ರಭುತ್ವ ಸಾಧಿಸಿದೆ. 21 ಟೆಸ್ಟ್ ಸರಣಿಗಳಲ್ಲಿ 11 ಸರಣಿಗಳಲ್ಲಿ ಭಾರತ ಗೆದ್ದಿದೆ, 6 ಸರಣಿಯನ್ನು ಕಿವೀಸ್ ತನ್ನದಾಗಿಸಿಕೊಂಡಿದೆ. 4 ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಆದರೆ ಈ ಟೆಸ್ಟ್ ಚಾಂಪಿಯನ್ಷಿಪ್ ನಲ್ಲಿ ಭಾರತ ಇದುವರೆಗೂ ಜಯ ಕಾಣದ ತಂಡವೆಂದರೆ ಅದು ನ್ಯೂಜಿಲೆಂಡ್. ತಂಡಗಳ ವಿವರ: ಭಾರತ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ ( ಉಪನಾಯಕ), ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ರಿಶಬ್ ಪಂತ್, ರವೀಮದ್ರ ಜಡೇಜಾ, ಹನುಮ ವಿಹಾರಿ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ವೃದ್ಧಿಮಾನ್ ಸಹಾ. ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೌಲ್ಟ್, ಡೆವೊನ್ ಕಾನ್ವೆ, ಕಾಲಿನ್ ಡೆ ಗ್ರ್ಯಾಂಡ್ ಹೋಮ್, ಮ್ಯಾಟ್ ಹೆನ್ರಿ, ಕೇಯ್ಲ್ ಜಾಮೆಸನ್, ಟಾಮ್ ಲಥಾಮ್, ಹೆನ್ರಿ ನಿಕೊಲಾಸ್, ಅಜಾಜ್ ಪಟೇಲ್, ಟಿಮ್ ಸೌಥೀ, ರಾಸ್ ಟೇಲರ್, ನೀಲ್ ವ್ಯಾಗ್ನರ್, ಬಿಜೆ ವಾಲ್ಟಿಂಗ್, ವಿಲ್ ಯಂಗ್. ಪಂದ್ಯ ಆರಂಭ: ಭಾರತೀಯ ಕಾಲಮಾನ ಅಪರಾಹ್ನ 3 ಗಂಟೆ